

ವಿಜಯವಾಣಿ ಸುದ್ದಿಜಾಲ ಧಾರವಾಡ
ಹಿರಿಯರು ವ್ಯಸನಿಗಳಾದರೆ ಕಿರಿಯರು ಅದೇ ಮಾರ್ಗ ಹಿಡಿಯುತ್ತಾರೆ. ಹೀಗಾಗಿ ಇಂದಿನ ಮಕ್ಕಳಿಗೆ ಮತ್ತು ಯುವ ಜನಾಂಗಕ್ಕೆ ಹಿರಿಯರು ಮಾರ್ಗದರ್ಶಕರಾಗುವ ರೀತಿ ವರ್ತಿಸಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಪರಶುರಾಮ ದೊಡಮನಿ ಅಭಿಪ್ರಾಯಪಟ್ಟರು.
ನಗರದ ಜೆಎಸ್‌ಎಸ್‌ನ ಆರ್.ಎಸ್. ಹುಕ್ಕೇರಿಕರ ಕಲಾ ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ, ಜಿಲ್ಲಾಡಳಿತ, ಪೋಲಿಸ ಇಲಾಖೆ, ಅಭಿಯೋಗ ಸರ್ಕಾರಿ ವ್ಯಾಜ್ಯಗಳ ಇಲಾಖೆ, ಶಾಲಾ ಶಿಕ್ಷಣ ಇಲಾಖೆ ಹಾಗೂ ಜೆಎಸ್‌ಎಸ್ ಸಹಯೋಗದಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ನಮ್ಮ ಮಕ್ಕಳ ರಕ್ಷಣೆ ನಮ್ಮ ಜವಾಬ್ದಾರಿ ವಿಶೇಷ ಅಭಿಯಾನ ಉದ್ಘಾಟಿಸಿ ಅವರು ಮಾತನಾಡಿದರು.
ಅಶೋಕ ಕೋರಿ ಮಾತನಾಡಿ, ಕೆಲವರು ಕೂತುಹಲಕ್ಕೆ, ಸ್ನೇಹಿತರ ಮೂಲಕ, ಜಾಹೀರಾತುಗಳಿಗೆ ಮರುಳಾಗಿ ದುಶ್ಚಟದ ದಾಸರಾಗುತ್ತಾರೆ. ದುಶ್ಚಟಗಳು ನಮ್ಮನ್ನು ದೈಹಿಕ ಮತ್ತು ಮಾನಸಿಕ ತೊಂದರೆಗೆ ತಳ್ಳುತ್ತವೆ. ಇದರಿಂದ ತಮ್ಮ ಬದುಕಿನಲ್ಲಿ ನೆಮ್ಮದಿ ಕಳೆದುಕೊಳ್ಳಬೇಕಾಗುತ್ತದೆ. ಸಜ್ಜನರ ಸಂಘವು ಹೆಜ್ಜೇನು ಸವಿದಂತೆ ಎನ್ನುವ ಮೂಲಕ ಉತ್ತಮ ಹವ್ಯಾಸಗಳನ್ನು ರೂಡಿಸಿಕೊಂಡಾಗ ದೇಹ ಮತ್ತು ಮನಸ್ಸನ್ನು ಸದೃಢವಾಗಿರುತ್ತದೆ ಎಂದರು.
ಡಾ. ಮೋಹನ ಕುಮಾರ ಮಾತನಾಡಿ, ದೇಶ ನನಗೇನು ಕೊಟ್ಟಿದೆ ಎಂಬುದಕ್ಕಿಂತ ದೇಶಕ್ಕಾಗಿ ನಾನೇನು ಕೊಟ್ಟೆ ಎಂಬುದರ ಕಡೆಗೆ ಇಂದಿನ ಯುವಕರು ಗಮನಹರಿಸಬೇಕು. ಮೂಲಭೂತ ಹಕ್ಕುಗಳ ಬಗ್ಗೆ ಮಾತನಾಡುವ ಜನತೆಯು ಕರ್ತವ್ಯಗಳನ್ನು ಕನಿಷ್ಠ ಸ್ಮರಣೆ ಮಾಡದೆ ಮುನ್ನಡೆಯುತ್ತಿದೆ. ಇದು ಅತ್ಯಂತ ವಿಷಾದಕರ ಸಂಗತಿ ಎಂದರು.
ಕಾಲೇಜಿನ ಪ್ರಾಚಾರ್ಯೆ ಭಾರತಿ ಶಾನಭಾಗ್ ಅಧ್ಯಕ್ಷತೆ ವಹಿಸಿದ್ದರು. ದೀಪಿಕಾ ಶೆಟ್ಟಿ, ನಿವೇದಿತಾ ಶೆಣೈ, ದೀಪಾ ದೇಶನೂರ, ಪ್ರತಿಭಾ ಹೆಬ್ಬಾರ, ಮಮತಾ ಯು.ಆರ್, ರೋಹಿಣಿ ತುರಬಿನ್, ಮೇಘಾ ಗುಡೆನಕಟ್ಟಿ, ಪ್ರಿಯಾಂಕಾ ಎಂ, ಕವಿತಾ ಬಡಿಗೇರ, ಇತರರು ಇದ್ದರು.
ವಿನಯಾ ಜೋಶಿ ಸ್ವಾಗತಿಸಿದರು. ಡಾ. ಶಿವಾನಂದ ಟವಳಿ ನಿರೂಪಿಸಿದರು. ಮನೋಹರ ಪಾಟೀಲ ವಂದಿಸಿದರು.