ಕಿಮ್್ಸ ಶುಶ್ರೂಷಕರಿಂದ ದಿನವಿಡೀ ಪ್ರತಿಭಟನೆ

h22-Kims 1
Published on

ಹುಬ್ಬಳ್ಳಿ: ಬೇಡಿಕೆ ಈಡೇರಿಸುವಂತೆ ಸಲ್ಲಿಸಿದ್ದ ಮನವಿ ಪತ್ರವನ್ನು ಕಿಮ್್ಸ ಆಡಳಿತಾಧಿಕಾರಿ ರಾಜಶ್ರೀ ಜೈನಾಪುರ ಅವರು ಕಾಲಿನಿಂದ ತುಳಿದು, ಅವಮಾನಿಸಿದರೆಂದು ಆರೋಪಿಸಿ ಕಿಮ್ಸ್​ನ ಕೋವಿಡ್ ಕರ್ತವ್ಯನಿರತ ಶುಶ್ರೂಷಕ ಅಧಿಕಾರಿಗಳು ಬುಧವಾರ ಇಡೀ ದಿನ ಪ್ರತಿಭಟನೆ ನಡೆಸಿದರು.

ಕೋವಿಡ್ ವಾರ್ಡ್ ಆರಂಭವಾದ ಮೇಲೆ ಕರೊನಾ ಸೇನಾನಿಗಳು ಇದೇ ಮೊದಲ ಬಾರಿಗೆ ಅಧಿಕಾರಿ ವಿರುದ್ಧ ಬಹಿರಂಗವಾಗಿ ತಿರುಗಿಬಿದ್ದಿದ್ದಾರೆ.

ಕೋವಿಡ್ ಕರ್ತವ್ಯ ನಿರ್ವಹಿಸುತ್ತಿರುವ ಶುಶ್ರೂಷಕ ಸಿಬ್ಬಂದಿಗೆ ಕಿಮ್್ಸ ಆವರಣದಲ್ಲಿಯೇ ಕ್ವಾರಂಟೈನ್​ಗೆ ವ್ಯವಸ್ಥೆ ಮಾಡಬೇಕು, ಜೀವ ವಿಮೆ ಮಾಡಿಸಬೇಕು ಎಂಬುದು ಸೇರಿ ವಿವಿಧ ಬೇಡಿಕೆ ಈಡೇರಿಸುವಂತೆ ಶುಶ್ರೂಷಕ ಅಧಿಕಾರಿಗಳು ಬೆಳಗ್ಗೆ ಸುಮಾರು 11.30ಕ್ಕೆ ಆಡಳಿತಾಧಿಕಾರಿಗೆ ಮನವಿ ಸಲ್ಲಿಸಿದರು. ಮನವಿ ಸ್ವೀಕರಿಸಿದ ಅಧಿಕಾರಿ, ಸರಿಯಾಗಿ ಕರ್ತವ್ಯ ಮಾಡುವಂತೆ ಗದರಿಕೊಂಡರು, ಪತ್ರವನ್ನು ನೆಲಕ್ಕೆಸೆದು ತುಳಿದು ದರ್ಪ ಮೆರೆದು ತಮ್ಮನ್ನು ಅವಮಾನಿಸಿದರು ಎಂದು ಶುಶ್ರೂಷಕ ಅಧಿಕಾರಿಗಳು ದೂರಿದ್ದಾರೆ.

ಅಧಿಕಾರಿ ಸರ್ವಾಧಿಕಾರಿ ಧೋರಣೆ ತೋರುತ್ತಿದ್ದಾರೆ. ಅಮಾನತುಗೊಳಿಸುವ ಬೆದರಿಕೆ ಹಾಕಿದ್ದಾರೆ. ಅವರು ಬಹಿರಂಗವಾಗಿ ಕ್ಷಮೆ ಕೇಳಬೇಕೆಂದು ಒತ್ತಾಯಿಸಿ 50ಕ್ಕೂ ಹೆಚ್ಚು ಶುಶ್ರೂಷಕ ಅಧಿಕಾರಿಗಳು ಕಿಮ್್ಸ ಆವರಣದಲ್ಲಿ ರಾತ್ರಿಯವರೆಗೂ ಪ್ರತಿಭಟನೆ ನಡೆಸಿದರು.

ಪ್ರತಿಭಟನೆ ಹಿಂಪಡೆಯುವಂತೆ ಕಿಮ್್ಸ ನಿರ್ದೇಶಕ ಡಾ. ರಾಮಲಿಂಗಪ್ಪ ಅಂಟರತಾನಿ, ಕಿಮ್್ಸ ಭದ್ರತಾ ಸಲಹೆಗಾರ ಎ.ಆರ್. ಬಡಿಗೇರ ಹಾಗೂ ಕಾಂಗ್ರೆಸ್ ಮುಖಂಡ ಮಹೇಂದ್ರ ಸಿಂಘಿ ಅವರು ಮನವೊಲಿಸುವ ಯತ್ನ ನಡೆಸಿದರು.

ಎಲ್ಲ ಬೇಡಿಕೆಗಳನ್ನು ಈಡೇರಿಸುವುದಾಗಿ ಡಾ. ರಾಮಲಿಂಗಪ್ಪ ಅಂಟರತಾನಿ ಭರವಸೆ ನೀಡಿದರೂ ಪ್ರತಿಭಟನಾಕಾರರು ಹಿಂದೆ ಸರಿಯಲಿಲ್ಲ. ಆಡಳಿತಾಧಿಕಾರಿ ರಾಜಶ್ರೀ ಜೈನಾಪುರ ಸ್ಥಳಕ್ಕೆ ಬಂದು ಕ್ಷಮೆ ಕೇಳಬೇಕು ಇಲ್ಲವೇ ಜಿಲ್ಲಾಧಿಕಾರಿ ಅವರು ಸ್ಥಳಕ್ಕೆ ಭೇಟಿ ನೀಡಬೇಕು ಎಂದು ಪಟ್ಟು ಹಿಡಿದರು.

ಸಂಜೆಯ ನಂತರ ಪ್ರತಿಭಟನಾನಿರತರ ಬಳಿ ತೆರಳಿದ ಆಡಳಿತಾಧಿಕಾರಿ, ಎಲ್ಲರೂ ಸೇರಿ ಕೋವಿಡ್ ಕರ್ತವ್ಯ ನಿರ್ವಹಿಸೋಣ ಎಂದು ಮನವೊಲಿಸುವ ಯತ್ನ ನಡೆಸಿದರು. ಆದರೆ ಪ್ರತಿಭಟನಾಕಾರರು ಜಗ್ಗಲಿಲ್ಲ.

ಜಿಲ್ಲಾಧಿಕಾರಿ ಬೇರೆ ಕೆಲಸದಲ್ಲಿ ನಿರತರಾಗಿದ್ದರಿಂದ ಅವರ ಸೂಚನೆ ಮೇರೆಗೆ ಹುಬ್ಬಳ್ಳಿ ತಹಸೀಲ್ದಾರ್ ಶಶಿಧರ ಮಾಡ್ಯಾಳ ಅವರು ರಾತ್ರಿ ಸ್ಥಳಕ್ಕೆ ತೆರಳಿ ಮನವೊಲಿಸಲು ಯತ್ನಿಸಿದರು. ಜಿಲ್ಲಾಧಿಕಾರಿಯವರ ಸಮ್ಮುಖದಲ್ಲೇ ಇತ್ಯರ್ಥವಾಗಬೇಕು ಎಂದು ಪ್ರತಿಭಟನಾಕಾರರು ಪಟ್ಟು ಹಿಡಿದರು. ವಿಷಯ ತಿಳಿದ ಜಿಲ್ಲಾಧಿಕಾರಿ ನಿತೇಶ ಪಾಟೀಲ, ಪ್ರತಿಭಟನಾಕಾರರ ನಾಲ್ವರು ಮುಖಂಡರು ಜು. 23ರಂದು ಬೆಳಗ್ಗೆ ತಮ್ಮ ಕಚೇರಿಗೆ ಬನ್ನಿ, ಕಿಮ್್ಸ ಅಧಿಕಾರಿಗಳನ್ನೂ ಕರೆಸಿ ಮಾತನಾಡುತ್ತೇನೆ ಎಂದು ಭರವಸೆ ನೀಡಿದರು. ನಂತರವಷ್ಟೇ ಶುಶ್ರೂಷಕರು ಸ್ಥಳದಿಂದ ಕದಲಿದರು.

ಪ್ರತಿಭಟನೆ ಕೈಬಿಡುವಂತೆ ಹಲವಾರು ಬಾರಿ ಶುಶ್ರೂಷಕ ಅಧಿಕಾರಿಗಳ ಮನವೊಲಿಸುವ ಪ್ರಯತ್ನ ನಡೆಸಿ, ಕೋವಿಡ್​ನ ಗಂಭೀರ ಪರಿಸ್ಥಿತಿ ಮನವರಿಕೆ ಮಾಡಿಕೊಟ್ಟಿದ್ದೇನೆ. ಆಡಳಿತಾಧಿಕಾರಿ ಅವರೂ ಪ್ರತಿಭಟನಾಕಾರರೊಂದಿಗೆ ಮಾತನಾಡಿದರು. - ಡಾ. ರಾಮಲಿಂಗಪ್ಪ ಅಂಟರತಾನಿ, ಕಿಮ್್ಸ ನಿರ್ದೇಶಕ

ಇನ್ಪೋಸಿಸ್ ಧರ್ಮಶಾಲೆಯಲ್ಲಿ ಕ್ವಾರಂಟೈನ್​ಗೆ ಎಲ್ಲ ವ್ಯವಸ್ಥೆ ಇದೆ. ಆದರೂ ಉದ್ದೇಶಪೂರ್ವಕ ಎಂಬಂತೆ ಪ್ರತಿಭಟನೆ ಮಾಡಲಾಗುತ್ತಿದೆ.- ರಾಜಶ್ರೀ ಜೈನಾಪುರ, ಕಿಮ್್ಸ ಆಡಳಿತಾಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net