ಕಿಮ್ಸ್​ನಲ್ಲೂ ಗೋಲ್‍ಮಾಲ್ ವಾಸನೆ?

KIMS_2
Published on

ಹುಬ್ಬಳ್ಳಿ: ಕೋವಿಡ್-19 ನಿಯಂತ್ರಣಕ್ಕಾಗಿ ವೈದ್ಯಕೀಯ ಉಪಕರಣಗಳ ಖರೀದಿಯಲ್ಲಿ ಅವ್ಯವಹಾರ ನಡೆದಿರುವ ಬಗ್ಗೆ ರಾಜ್ಯಾದ್ಯಂತ ಆರೋಪಗಳು ಕೇಳಿಬರುತ್ತಿರುವ ಬೆನ್ನಲ್ಲಿಯೇ ‘ಕಿಮ್್ಸ’ನಲ್ಲಿಯೂ ಇಂತಹದೊಂದು ಅಕ್ರಮ ನಡೆದಿದೆಯೇ ಎಂಬ ಸಂಶಯ ಕಿಮ್್ಸ ಪ್ರಾಂಗಣದಲ್ಲಿ ಕೇಳಿಬರುತ್ತಿದೆ.

ಕರೊನಾ ಸೋಂಕು ಪ್ರಾರಂಭಗೊಂಡ ದಿನಗಳಲ್ಲಿ ಕಿಮ್್ಸ ಆಡಳಿತ ಮಂಡಳಿ ಕುಂದಾಪುರದ ಧಾತ್ರಿ ಸುಮುಖ ಸರ್ಜಿಕಲ್ಸ್ ಇಂಡಿಯಾ ಪ್ರೖೆ.ಲಿ. ಎಂಬ ಉದ್ಯಮವೊಂದರಿಂದ ಕೋವಿಡ್ ಉಪಕರಣಗಳನ್ನು ದುಬಾರಿ ಬೆಲೆಗೆ ಖರೀದಿಸಿರುವುದು ಹಾಗೂ ಈ ಸಂಬಂಧ ಕಿಮ್್ಸ ಅಧಿಕಾರಿಗಳು ಮಾಹಿತಿ ಮುಚ್ಚಿಡಲು ಯತ್ನಿಸುತ್ತಿರುವುದು ಈ ಶಂಕೆ ಉದ್ಭವಿಸಲು ಪ್ರಮುಖ ಕಾರಣ.

ಫೆಬ್ರವರಿ ಹಾಗೂ ಮಾರ್ಚ್​ನಲ್ಲಿ ಕಿಮ್ಸ್​ನಿಂದ ಪಿಪಿಇ ಕಿಟ್, ಎನ್ 95 ಮಾಸ್ಕ್, ಸಾಮಾನ್ಯ ಮಾಸ್ಕ್ ಹಾಗೂ ಸ್ಯಾನಿಟೈಸರ್​ಗಳನ್ನು ತಕ್ಷಣದ ಬೇಡಿಕೆ ಆಧಾರದ ಮೇಲೆ ಏಜೆನ್ಸಿ ಮೂಲಕ ಖರೀದಿಸಲಾಗಿತ್ತು. ಕಿಮ್್ಸ ಖರೀದಿಸಿದ ಪಿಪಿಇ ಕಿಟ್​ಗಳಿಗೆ ಐಎಂಸಿಆರ್ ಅನುಮೋದನೆಯೂ ಇರಲಿಲ್ಲ. ಆದಾಗ್ಯೂ, ಪ್ರಮಾಣಿಕೃತವಲ್ಲದ ಪಿಪಿಇ ಕಿಟ್​ಗಳನ್ನು ಆಡಳಿತ ಮಂಡಳಿ ಖರೀದಿಸಿದ್ದು ಹೇಗೆ ?

ಅದೂ ಯಾರದೋ ಪ್ರಭಾವಕ್ಕೆ ಮತ್ತು ದುಬಾರಿ ಬೆಲೆಗೆ ಖರೀದಿಸಲಾಗಿದೆ ಎಂಬ ದೂರು ಕೇಳಿಬರುತ್ತಿದೆ.

ಥರ್ಡ್ ಪಾರ್ಟಿ ಏಜೆನ್ಸಿಯೊಂದರಿಂದ ಉಪಕರಣಗಳ ಗುಣಮಟ್ಟ ಪರಿಶೀಲಿಸಿದ ನಂತರವೇ ಟೆಂಡರ್ ಕರೆದು ಖರೀದಿ ಪ್ರಕ್ರಿಯೆಗೆ ಚಾಲನೆ ನೀಡಲಾಯಿತು ಎಂದು ಸ್ಪಷ್ಟೀಕರಣ ನೀಡುವ ಕಿಮ್್ಸ ಅಧಿಕಾರಿಗಳು, ಖರೀದಿಯ ವಿವರ ಬಹಿರಂಗಪಡಿಸಲು ನಿರಾಕರಿಸುತ್ತಿದ್ದಾರೆ.

ಕುಂದಾಪುರದಿಂದ ಖರೀದಿಸಿರುವ ಕೋವಿಡ್ ಉಪಕರಣಗಳ ವಿವರ ಹಾಗೂ ಖರೀದಿಗೆ ವ್ಯಯಿಸಿದ ಮೊತ್ತದ ವಿವರವನ್ನು ಕಿಮ್್ಸ ನಿರ್ದೇಶಕರ ಬಳಿ ಕೇಳುವಂತೆ ಆಡಳಿತಾಧಿಕಾರಿ ರಾಜಶ್ರೀ ಜೈನಾಪುರ ಹೇಳಿದರೆ, ನಿರ್ದೇಶಕ ಡಾ. ರಾಮಲಿಂಗಪ್ಪ ಅಂಟರತಾನಿ ಅವರು ಆಡಳಿತಾಧಿಕಾರಿ ಬಳಿ ಮಾಹಿತಿ ಇದೆ ಎನ್ನುತ್ತಾರೆ.

‘ನಾವು ಪಿಪಿಇ ಕಿಟ್​ಗಳ ಖರೀದಿ ವಿವರ ನೀಡಲು ಆಗುವುದಿಲ್ಲ. ಅದು ಆಡಳಿತಾತ್ಮಕ ವಿಷಯ’ ಎನ್ನುತ್ತಾರೆ ನಿರ್ದೇಶಕರು.

ಮಾರ್ಚ್ ನಂತರದಿಂದ ಜಿಲ್ಲಾಡಳಿತವೇ ಕಿಮ್ಸ್​ಗೆ ಕೋವಿಡ್ ಉಪಕರಣಗಳನ್ನು ಪೂರೈಸತೊಡಗಿದೆ. ಈ ಮಧ್ಯೆ ಕೆಲ ಸಂಘಟನೆಗಳು ಸಹ ಕಿಮ್ಸ್​ಗೆ ಉಪಕರಣಗಳನ್ನು ದೇಣಿಗೆ ಅಥವಾ ಕೊಡುಗೆ ನೀಡಿವೆ.

ಜಿಲ್ಲಾಡಳಿತ-ಸಂಘಟನೆಗಳಿಂದ ಉಪಕರಣ: ಜಿಲ್ಲಾಡಳಿತದಿಂದ ಕಿಮ್್ಸ ಇದುವರೆಗೆ ಸುಮಾರು 16 ಸಾವಿರ ಪಿಪಿಇ ಕಿಟ್ ಖರೀದಿಸಿದ್ದು, 2,198 ಪಿಪಿಇ ಕಿಟ್​ಗಳನ್ನು ವಿವಿಧ ಸಂಘಟನೆಗಳು ನೀಡಿವೆ. 51 ಸಾವಿರ ಎನ್ 95 ಮಾಸ್ಕ್, 1.05 ಲಕ್ಷ ಸಾಮಾನ್ಯ ಮಾಸ್ಕ್, 100 ಎಂಎಲ್​ನ 1,450 ಲೀಟರ್ ಸ್ಯಾನಿಟೈಸರ್, 5 ಲೀಟರ್ ಕ್ಯಾನ್​ನ 1,182 ಲೀ. ಸ್ಯಾನಿಟೈಸರ್ ಕಿಮ್ಸ್​ಗೆ ಜಿಲ್ಲಾಡಳಿತದ ಮೂಲಕ ಬಂದಿದೆ.

ವಿವಿಧ ಸಂಘಟನೆಗಳು ಕಿಮ್ಸ್​ಗೆ 671 ಎನ್ 95 ಮಾಸ್ಕ್, 13,500 ಸಾಮಾನ್ಯ ಮಾಸ್ಕ್, 770 ಫೇಸ್ ಶೀಲ್ಡ್, ಸುಮಾರು 1 ಸಾವಿರದಷ್ಟು ಬಟ್ಟೆಯ ಮಾಸ್ಕ್​ಗಳನ್ನು ನೀಡಿವೆ. ಜಿಲ್ಲಾಡಳಿತ ಹಾಗೂ ಸಂಘಟನೆಗಳಿಂದ ಇದುವರೆಗೆ ಸುಮಾರು 18,198 ಪಿಪಿಇ ಕಿಟ್​ಗಳನ್ನು ಕಿಮ್್ಸ ಪಡೆದಿದೆ. ಇವೆಲ್ಲವನ್ನು ಸ್ಟಾಕ್​ಗೆ ಪಡೆಯಲಾಗಿದೆ ಎಂದು ಕಿಮ್್ಸ ನಿರ್ದೇಶಕರು ಹೇಳುತ್ತಾರೆ. ಆದರೆ ಈವರೆಗೆ ಮಾಡಿರುವ ಖರೀದಿಸಿದ ಸಾಮಗ್ರಿಗಳೇನು? ಖರ್ಚು-ವೆಚ್ಚ ಎಷ್ಟು ? ಯಾರಿಂದ ಖರೀದಿಸಿದ್ದು ಎಂಬ ಮಾಹಿತಿಗಳನ್ನು ಬಹಿರಂಗ ಪಡಿಸುತ್ತಿಲ್ಲ.

ಜಿಲ್ಲಾಡಳಿತದ ಮೂಲಕ ಕೋವಿಡ್ ಉಪಕರಣಗಳನ್ನು ಕಿಮ್್ಸ ಪಡೆಯುತ್ತಿದೆ. ಕೆಲ ಸಂಘ-ಸಂಸ್ಥೆಗಳು ಸಹ ಉಪಕರಣಗಳನ್ನು ಕಿಮ್ಸ್​ಗೆ ನೀಡಿವೆ. ಆಸ್ಪತ್ರೆಯಲ್ಲಿ ಕೋವಿಡ್ ಉಪಕರಣಗಳ ಕೊರತೆ ಇಲ್ಲ.| ಡಾ. ರಾಮಲಿಂಗಪ್ಪ ಅಂಟರತಾನಿ, ಕಿಮ್್ಸ ನಿರ್ದೇಶಕರು, ಹುಬ್ಬಳ್ಳಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net