

ಮರಿದೇವ ಹೂಗಾರ ಹುಬ್ಬಳ್ಳಿ
ಏಯ್ ಏನಂದ್ಕೊಂಡಿದೀಯಾ? ನಾವ್ ಯಾರು ಗೊತ್ತಾ? ಹಿಂಗೆಲ್ಲ ಮಾಡಿದ್ರೆ ನಡಿಯಾಂಗಿಲ್ಲ... ನಮಗೆ ಎಲ್ಲ ಸವಲತ್ತೂ ಬೇಕ್ ಅಂದ್ರೆ ಬೇಕ್. ಇಲ್ಲಾಂದ್ರೆ ಎದ್ದೋಗಿಬಿಡ್ತೀವಿ..!
ದೆಹಲಿಯ ಮರ್ಕಜ್ ‘ನಿಜಾಮುದ್ದೀನ್’ ಮಸೀದಿಯಲ್ಲಿ ಏರ್ಪಡಿಸಿದ್ದ ಧಾರ್ವಿುಕ ಸಮಾವೇಶದಲ್ಲಿ ಭಾಗವಹಿಸಿ ಬಂದವರಲ್ಲಿ ಕೆಲವರು ಇಲ್ಲಿಯ ಕಿಮ್ಸ್ಗೆ ದಾಖಲಿಸಲ್ಪಟ್ಟ ನಂತರ ವೈದ್ಯರು, ಸಿಬ್ಬಂದಿಗೆ ಹೀಗೆ ಆವಾಜ್ ಹಾಕುತ್ತ ಸೌಲಭ್ಯಕ್ಕಾಗಿ ಪಟ್ಟುಹಿಡಿದಿದ್ದಾರೆ.
ದೆಹಲಿಯಿಂದ ವಾಪಸ್ ಬಂದಿರುವ 15 ಮಂದಿಯನ್ನು ಜಿಲ್ಲಾಡಳಿತ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಪೊಲೀಸರೊಂದಿಗೆ ಹೋಗಿ ಹುಡುಕಿ ಕರೆತಂದು ತಪಾಸಣೆಗಾಗಿ ಕಿಮ್ಸ್ಗೆ ದಾಖಲಿಸಿದ್ದಾರೆ.
ಅವರಲ್ಲಿ ಕೆಲವರು ‘ನಮ್ಗೆ ಕರೊನಾ ಗಿರೊನಾ ಏನೂ ಇಲ್ಲ. ಆರಾಮಿದ್ದೀವಿ. ಸುಮ್ನೆ ನಮ್ಮನ್ನ ಕರ್ಕೆಂಡುಬಂದಿದ್ದೀರಿ. ಈಗ ಸೌಲಭ್ಯ ಕೊಡದಿದ್ದರೆ ಹೇಗೆ...’ ಎಂದೆಲ್ಲ ಕಿಮ್ಸ್ನವರನ್ನು ಮೇಲಿಂದ ಮೇಲೆ ಗದರಿಕೊಂಡಿರುವುದಾಗಿ ತಿಳಿದುಬಂದಿದೆ.
ತಾವು ವಿಐಪಿ ಎಂದೇ ಭಾವಿಸಿಕೊಂಡಿರುವ ಅವರು, ಕುಡಿಯಲು ಲೋಟದಲ್ಲಿ ತಂದುಕೊಟ್ಟ ನೀರು ಬೇಡ; ಬಿಸ್ಲೇರಿ ಬಾಟಲಿಯನ್ನೇ ಎನ್ನುವುದರಿಂದ ಹಿಡಿದು ಗಂಟೆಗೆ 3-4 ಸಲ ಒಂದಲ್ಲ ಒಂದು ವರಾತ ಮಾಡಿದ್ದಾರೆ.
ವಿಶೇಷ ವಾರ್ಡ್ನಲ್ಲಿ ಹೊಸ ಹಾಸಿಗೆ, ದಿಂಬು, ಬೆಡ್ಶೀಟ್ಗಳನ್ನೇ ಹಾಕಲಾಗಿದೆ. ಅವೂ ಸರಿ ಇಲ್ಲ ಎಂದು ದೂರಿದ್ದಾರಂತೆ. ವಾರ್ಡ್ನಲ್ಲೇ ಇರತಕ್ಕದ್ದು ಎಂದು ಸೂಚಿಸಿದ್ದರೂ ಬೆಳಗ್ಗೆ ಎದ್ದು ಟೂಥ್ಪೇಸ್ಟ್, ಬ್ರಷ್ ಕೊಡಿ ಎನ್ನುತ್ತ ಒಂದಿಬ್ಬರು ಹೊರಗೇ ಬಂದಿದ್ದರಂತೆ. ಆಸ್ಪತ್ರೆಯವರು ಅವರಿಗೆ ಅದನ್ನೆಲ್ಲ ಒದಗಿಸಿದ್ದಾರೆ. ಬೆಳಗ್ಗೆ ನಾಸ್ಟಾ ತಂದಾಗ, ಕೇವಲ ಉಪ್ಪಿಟ್ಟು ತಂದ್ರೆ ತಿನ್ನೋದು ಹೇಗೆ ಎಂದು ಗದರಿಸಿ, ಶಿರಾವನ್ನೂ ತರಿಸುವಂತೆ ಮಾಡಿದರಂತೆ!
ಸಿಬ್ಬಂದಿಗೆ ತಲೆಬೇನೆ: ವಿಶೇಷ ವಾರ್ಡ್ನಲ್ಲಿ ಮಲಗಿರಿ ಎಂದರೆ ಎದ್ದು ಆಚೀಚೆಗೆಲ್ಲ ಓಡಾಡುವ, ಕಿಟಕಿ ಬಳಿ ಹೋಗಿ ನಿಂತು ಹೊರಗೆ ನೋಡುತ್ತ ನಿಲ್ಲುವ ಈ ಜನಗಳು ಕಿಮ್್ಸ ಸಿಬ್ಬಂದಿಗೆ ತಲೆಬೇನೆ ಉಂಟುಮಾಡಿದ್ದಾರೆ. ಸೂಚನೆ ನೀಡಿದರೆ, ‘ಏನ್ ಹೇಳ್ತೀರಿ ನಮಗೆಲ್ಲ. ಕರೊನಾ ಸೋಂಕು ಟೆಸ್ಟ್ಗೆ ಕರೆದಿದ್ದಾರೆ. ನೆಗೆಟಿವ್ ಬರ್ತದೆ. ನಮಗೆ ಏನೂ ಆಗಿಲ್ಲ... ಎಂದು ಗದರಿಸಿದ್ದಾರೆ ಎಂದು ತಿಳಿದುಬಂದಿದೆ.
44 ಜನರ ವರದಿ ನೆಗೆಟಿವ್: ಧಾರವಾಡ ಜಿಲ್ಲೆಯಲ್ಲಿ ಇದುವರೆಗೆ 44 ಜನರ ಗಂಟಲು ದ್ರವದ ಮಾದರಿಯನ್ನು ತಪಾಸಣೆ ಮಾಡಲಾಗಿದ್ದು, ನೆಗೆಟಿವ್ ವರದಿ ಬಂದಿದೆ. ಒಬ್ಬನಿಗೆ ಮಾತ್ರ ಕರೊನಾ ದೃಢಪಟ್ಟಿದ್ದು, ಚಿಕಿತ್ಸೆ ಮುಂದುವರಿದಿದೆ. ಅವರ್ಯಾರೂ ಹೀಗೆ ತೊಂದರೆ ಕೊಟ್ಟಿಲ್ಲ; ಸೂಚನೆಗಳನ್ನು ಪಾಲಿಸಿದ್ದಾರೆ. ಆದರೆ, ಇವರು ಒಂದೇ ದಿನದಲ್ಲಿ ವೈದ್ಯರು, ಸಿಬ್ಬಂದಿಯನ್ನು ಹೈರಾಣಾಗಿಸಿದ್ದಾರೆ ಎಂದು ಗೊತ್ತಾಗಿದೆ.
ಸುಮ್ನೆ ಸಹಕಾರ ನೀಡಿದರೆ ಸರಿ: ವೈದ್ಯರು ಮತ್ತು ಸಿಬ್ಬಂದಿ ಸಾಕಷ್ಟು ತಾಳ್ಮೆ ವಹಿಸಿದರೂ ಪ್ರಯೋಜನವಾಗದೇ ಇದ್ದಾಗ, ಹೊರಗಡೆ ಇದ್ದ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ವಿಶೇಷ ವಾರ್ಡ್ ಬಾಗಿಲಿಗೆ ಬಂದು ನಿಂತ ಪೊಲೀಸರು, ‘ಸುಮ್ನೆ ಸಹಕಾರ ನೀಡಿದರೆ ಸರಿ, ಹೊರಗೆ ಬಂದರೆ ನಿಮ್ಮನ್ನು ಹೇಗೆ ಒಳಗೆ ಕಳಿಸಬೇಕು ಎಂದು ನಮಗೆ ಗೊತ್ತಿದೆ’ ಎಂದು ಆವಾಜ್ ಹಾಕಿದ ನಂತರ ಸ್ವಲ್ಪ ತಣ್ಣಗಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.