ಕಿಮ್ಮನೆ ರತ್ನಾಕರ್, ಆರ್‌ಎಂಎಂ ನಡುವಿನ ಭಿನ್ನಮತ ಶಮನ; ಜತೆಯಾಗಿ ಕೆಲಸ ಮಾಡಲು ಇಬ್ಬರೂ ನಾಯಕರ ಸಮ್ಮತಿ: ಎಚ್.ಎಸ್.ಸುಂದರೇಶ್

WEB Sundresh (1)
Published on

ತೀರ್ಥಹಳ್ಳಿ: ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಹಾಗೂ ಕೆಪಿಸಿಸಿ ಸಹಕಾರ ವಿಭಾಗದ ಸಂಚಾಲಕ ಆರ್.ಎಂ.ಮಂಜುನಾಥ ಗೌಡ ನಡುವಿನ ಭಿನ್ನಮತ ಶಮನವಾಗಿದ್ದು, ಒಟ್ಟಾಗಿ ಕೆಲಸ ಮಾಡಲು ಇಬ್ಬರೂ ಸಮ್ಮಿತಿಸಿದ್ದಾರೆ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಚ್.ಎಸ್.ಸುಂದರೇಶ್ ಹೇಳಿದರು.

ತೀರ್ಥಹಳ್ಳಿಯಲ್ಲಿ ಕಾಂಗ್ರೆಸ್ ಗೆಲುವು ಖಚಿತವಾಗಿದ್ದು ಈ ಇಬ್ಬರು ಪ್ರಮುಖ ನಾಯಕರ ನಡುವಿನ ಅಸಮಾಧಾನ ಪಕ್ಷಕ್ಕೆ ಹಿನ್ನಡೆಯಾಗುವ ಸಾಧ್ಯತೆ ಇತ್ತು. ಹೀಗಾಗಿ ಇಬ್ಬರೂ ಮುಖಂಡರ ಜತೆ ಸಮಾಲೋಚನೆ ನಡೆಸಿದ್ದು ಎಲ್ಲರನ್ನೂ ಒಗ್ಗೂಡಿಸಿಕೊಂಡು ಭಿನ್ನಾಭಿಪ್ರಾಯವನ್ನು ಮರೆತು ಜತೆಯಾಗಿ ಕೆಲಸ ಮಾಡಲು ಇಬ್ಬರೂ ಸಮ್ಮತಿಸಿದ್ದಾರೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಫೆ.8ರಂದು ತಾಲೂಕಿಗೆ ಆಗಮಿಸಲಿರುವ ಪ್ರಜಾಧ್ವನಿ ಯಾತ್ರೆ ಯಶಸ್ಸಿಗೆ ಕ್ಷೇತ್ರ ವ್ಯಾಪ್ತಿಯ 18 ಜನರ ಸಮನ್ವಯ ಸಮಿತಿ ರಚಿಸಲಾಗಿದೆ. ದ್ವೇಷದ ರಾಜಕಾರಣದ ಮೂಲಕ ಜನರ ಮನಸ್ಸನ್ನು ಒಡೆದಿರುವುದನ್ನು ರಾಹುಲ್‌ಗಾಂಧಿ ದೇಶದ ಉದ್ದಕ್ಕೂ 4 ಸಾವಿರ ಕಿಮೀ ಪಾದಯಾತ್ರೆಯ ಮೂಲಕ ಜನರನ್ನು ಬೆಸೆಯುವ ಪ್ರಯತ್ನ ಮಾಡಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ರಾಜ್ಯದ ದಕ್ಷಿಣ ಭಾಗದಲ್ಲಿ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉತ್ತರ ಕರ್ನಾಟಕ ಭಾಗದಲ್ಲಿ ಪ್ರಜಾಧ್ವನಿ ಯಾತ್ರೆಯ ಮೂಲಕ ಜನಜಾಗೃತಿಯನ್ನು ಮೂಡಿಸುವ ಕಾರ್ಯದಲ್ಲಿ ತೊಡಗಿದ್ದಾರೆ ಎಂದು ತಿಳಿಸಿದರು.

ನಿರುದ್ಯೋಗ ಸಮಸ್ಯೆಗೆ ಪರಿಹಾರ ರೂಪಿಸದ ಬಿಜೆಪಿ ಜಿಎಸ್‌ಟಿ, ನೋಟ್ ಬ್ಯಾನ್ ಮೂಲಕ ಜನರ ಬದುಕನ್ನು ಅತಂತ್ರಕ್ಕೆ ತಳ್ಳಿದೆ. ಬಹುರಾಷ್ಟ್ರೀಯ ಕಂಪನಿಗಳ ಹಿತವನ್ನು ಬಯಸುವ ಬಿಜೆಪಿ ಸರ್ಕಾರ ಅಂಬಾನಿ, ಅದಾನಿ ಪರವಾಗಿದೆ. ಅದಾನಿ ಕಂಪನಿ 10 ಲಕ್ಷ ಕೋಟಿ ರೂ. ನಷ್ಟದಲ್ಲಿ ಬಿದ್ದಿರುವುದರಿಂದ ದೇಶದ ಹಲವು ಬ್ಯಾಂಕುಗಳು ದಿವಾಳಿಯಾಗುವುದು ಖಚಿತ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net