

ಹುಬ್ಬಳ್ಳಿ : ಕಾಂಗ್ರೆಸ್ನಲ್ಲಿ ಗುಲಾಮಿತನ ಇನ್ನೂ ಇದೆ. ಪಕ್ಷದಲ್ಲಿ ನಾಯಿಗೆ ಕಿಮ್ಮತ್ತು ಇದೆ, ನಮಗೆ ಮರ್ಯಾದೆ ಇಲ್ಲವೆಂದು ಅನೇಕ ಕಾಂಗ್ರೆಸ್ಸಿಗರು ಹೇಳಿದ್ದಾರೆ. ಪಕ್ಷದಲ್ಲಿ ನಮ್ಮದೇನೂ ನಡೆಯುವುದಿಲ್ಲ, ಎಲ್ಲ ಗಾಂಧಿ ಪರಿವಾರದ್ದೇ ನಡೆಯುವುದೆಂದು ಆ ಪಕ್ಷದ ಬಹಳಷ್ಟು ಮುಖಂಡರು ಕಾಲಕಾಲಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಟೀಕಿಸಿದ್ದಾರೆ.
ನಗರದಲ್ಲಿ ಶುಕ್ರವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಇದೇ ಸಿದ್ದರಾಮಯ್ಯ ಈ ಹಿಂದೆ ಕಾಂಗ್ರೆಸ್ ವಿರುದ್ಧ ಏನೇನು ಮಾತನಾಡಿದ್ದಾರೆಂದು ನೆನಪಿಸಿಕೊಳ್ಳಲಿ ಎಂದರು.
ತಮ್ಮ ಪಕ್ಷದವರು ಹಣ ಪಡೆದು ಟಿಕೆಟ್ ಹಂಚುತ್ತಾರೆಂದು ಕಾಂಗ್ರೆಸ್ನವರೇ ಹೇಳುತ್ತಾರೆ. ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಅವರ ಮನೆಯ ಎದುರು ಟಿಕೆಟ್ ಆಕಾಂಕ್ಷಿಗಳು ತಿರುಗಾಡುವುದನ್ನು ನೋಡಿದರೆ ಬ್ರೋಕರ್ ಯಾರೆಂಬುದು ಗೊತ್ತಾಗುತ್ತದೆ ಎಂದರು.
ದೇಶದಲ್ಲಿ ಭ್ರಷ್ಟಾಚಾರದ ರಕ್ತ ಬೀಜಾಸುರನನ್ನು ಹುಟ್ಟಿಸಿದ್ದೇ ಕಾಂಗ್ರೆಸ್. ಜವಾಹರಲಾಲ್ ನೆಹರು ಅವರಿಂದ ಹಿಡಿದು ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆವರೆಗಿನ ಆ ಪಕ್ಷದ ಎಲ್ಲ ನಾಯಕರು ಭ್ರಷ್ಟ ವ್ಯವಸ್ಥೆ ನಿರ್ಮಾಣ ಮಾಡಿದ್ದಾರೆ ಎಂದು ದೂರಿದರು.
ಮಲ್ಲಿಕಾರ್ಜುನ ಖರ್ಗೆ ಅವರು ಬಹಳ ಮಾತನಾಡಿದರೆ ಅವರನ್ನು ರಾಷ್ಟ್ರೀಯ ನಾಯಕನ್ನೆನ್ನುತ್ತಾರೆ ಎಂದುಕೊಂಡಿರಬಹುದು. ಆ ಪಕ್ಷ ಬೂತಕಾಲದ ಪಾರ್ಟಿ ಎನ್ನುವುದನ್ನು ನೆನಪಿನಲ್ಲಿ ಇಟ್ಟುಕೊಳ್ಳಬೇಕು ಎಂದು ಹೇಳಿದರು.