

ಚಾಮರಾಜನಗರ: ಕಿತ್ತೂರು ರಾಣಿ ಚನ್ನಮ್ಮ ಸ್ವಾಭಿಮಾನ, ದೇಶಭಕ್ತಿಯ ಸಂಕೇತ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಅಧ್ಯಕ್ಷ ಸುರೇಶ್ ಎನ್.ಋಗ್ವೇದಿ ಬಣ್ಣಿಸಿದರು.
ನಗರದ ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ ಸಭಾಂಗಣದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಸಹಯೋಗದಲ್ಲಿ ಬುಧವಾರ ಆಯೋಜಿಸಿದ್ದ ಕಿತ್ತೂರು ರಾಣಿ ಚನ್ನಮ್ಮ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಬ್ರಿಟಿಷರ ವಿರುದ್ಧ ಭಾರತದಲ್ಲಿ ಮೊಟ್ಟ ಮೊದಲ ಬಾರಿಗೆ ಹೋರಾಟ ನಡೆಸಿದ ವೀರ ವನಿತೆ, ಕನ್ನಡದ ಮಹಿಳೆ ಕಿತ್ತೂರು ರಾಣಿ ಚನ್ನಮ್ಮ ಸದಾ ಕಾಲ ಸ್ಮರಣೀಯರು. ಬ್ರಿಟಿಷರ ವಿರುದ್ಧ ಗೆದ್ದ ವಿಜಯದ ಸಂಕೇತವಾಗಿ ಕಿತ್ತೂರು ವಿಜಯೋತ್ಸವವನ್ನು ಸರ್ಕಾರ ಆಚರಿಸುತ್ತಿರುವುದು ಸಂತಸದ ವಿಷಯ ಎಂದರು.
ಕಿತ್ತೂರು ಸಂಸ್ಥಾನ ಚಿಕ್ಕದಾದರೂ ಬ್ರಿಟಿಷರ ವಿರುದ್ಧ ತೋರಿದ ಪ್ರತಿಭಟನೆ ವಿಶೇಷವಾದದ್ದು. ಕಿತ್ತೂರಿನ ಕೆಲವು ದೇಶದ್ರೋಹಿಗಳು ಬ್ರಿಟಿಷರ ಪರವಾಗಿ ಆಸೆ ಆಮಿಷಗಳಿಗೆ ಬಲಿಯಾಗಿ ಕಿತ್ತೂರಿನ ರಹಸ್ಯಗಳನ್ನು ಶತ್ರುಗಳಿಗೆ ತಿಳಿಸಿ ಕಿತ್ತೂರು ನಾಶವಾಗಲು ಕಾರಣವಾದರು. ಆದರೂ ನೂರಾರು ಕಿತ್ತೂರಿನ ನಿಷ್ಠಾವಂತ ಸೈನಿಕರು ಹೋರಾಡಿ ಕಿತ್ತೂರು ಸಂಸ್ಥಾನವನ್ನು ಉಳಿಸಿದ ಹೆಮ್ಮೆ ನಮ್ಮದು. ದಿಟ್ಟತನದಿಂದ ಕೊನೆ ಕ್ಷಣದವರೆಗೂ ಹೋರಾಟ ನಡೆಸಿದ ಕಿತ್ತೂರು ರಾಣಿ ಚನ್ನಮ್ಮ ಬಂಧನಕ್ಕೆ ಒಳಗಾಗಿ ಅಂತಿಮವಾಗಿ ಮರಣವನ್ನಪ್ಪಿದರೂ ಕೋಟಿ ಕೋಟಿ ಭಾರತೀಯರಲ್ಲಿ ವಿಶೇಷವಾಗಿ ಕನ್ನಡಿಗರಲ್ಲಿ ಮನೆ ಮಾತಾಗಿದ್ದಾರೆ ಎಂದರು.
ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯ, ನಗರಸಭೆ ಮಾಜಿ ಸದಸ್ಯೆ ಪದ್ಮಾ ಪುರುಷೋತ್ತಮ್ ಮಾತನಾಡಿ, ಕನ್ನಡಿಗರ ತಾಯಿ ಕಿತ್ತೂರು ರಾಣಿ ಚನ್ನಮ್ಮ. ಮಹಿಳೆಯಾಗಿ ಹೋರಾಟ ನಡೆಸಿದ ಚನ್ನಮ್ಮ ನಮ್ಮೆಲ್ಲರಿಗೂ ಆದರ್ಶವಾಗಿದ್ದಾರೆ ಎಂದರು. ಕುಸುಮಾ ಋಗ್ವೇದಿ, ಶಿವಲಿಂಗಮೂರ್ತಿ, ಪರಮೇಶ್ವರಪ್ಪ, ರವಿಚಂದ್ರ ಪ್ರಸಾದ್, ಕಾರ್ತಿಕ್, ಉಮೇಶ್ ಉಪಸ್ಥಿತರಿದ್ದರು.