ಕಿತ್ತೂರು ರಾಣಿ ಚನ್ನಮ್ಮ ವಿಜಯಜ್ಯೋತಿ ರಥಯಾತ್ರೆ ಸ್ವಾಗತ

ಕಿತ್ತೂರು ರಾಣಿ ಚನ್ನಮ್ಮ ವಿಜಯಜ್ಯೋತಿ ರಥಯಾತ್ರೆ ಸ್ವಾಗತ
Published on

ಹಾಸನ: ಕಿತ್ತೂರು ರಾಣಿ ಚನ್ನಮ್ಮ ವಿಜಯಜ್ಯೋತಿ ರಥಯಾತ್ರೆ ಅ.4 ರಂದು ಹಾಸನ ನಗರಕ್ಕೆ ಆಗಮಿಸಿದ ಸಂದರ್ಭದಲ್ಲಿ ಕನ್ನಡ ಸಂಸ್ಕೃತಿ ಇಲಾಖೆ, ಅಖಿಲ ಭಾರತ ವೀರಶೈವ ಮಹಾಸಭಾ, ಬಸವ ಕೇಂದ್ರ, ವೀರಶೈವ ಯುವ ಸೇನೆ ಹಾಗೂ ವೀರಶೈವ ಲಿಂಗಾಯತ ಸಮಾಜದ ವತಿಯಿಂದ ಸ್ವಾಗತಿಸಲಾಯಿತು.


ನಗರದ ಡೇರಿ ವೃತ್ತದಲ್ಲಿ ರಥವನ್ನು ಸ್ವಾಗತಿಸಿ ಮೆರವಣೆಗೆ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ತರಲಾಯಿತು. ಮೆರವಣಿಗೆಯಲ್ಲಿ ವಿವಿಧ ಕಲಾತಂಡಗಳೊಂದಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಧಿಕಾರಿ ನರಸಿಂಹಯ್ಯ, ಅಖಿಲ ಭಾರತ ವೀರಶೈವ ಮಹಾಸಭಾ ಹಾಸನ ತಾಲೂಕು ಘಟಕದ ಅಧ್ಯಕ್ಷ ಕಟ್ಟಾಯ ಶಿವಕುಮಾರ್, ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಅಧ್ಯಕ್ಷ ಕೃಷ್ಣೇಗೌಡ, ಹಾಸನ ಬಸವ ಕೇಂದ್ರದ ಅಧ್ಯಕ್ಷ ಯು.ಎಸ್. ಬಸವರಾಜು, ವೀರಶೈವ ಲಿಂಗಾಯತ ಯುವ ವೇದಿಕೆ ಜಿಲ್ಲಾ ಕಾರ್ಯದರ್ಶಿ ಮಾವನೂರು ಮೋಹನ್, ನಿವೃತ್ತ ಬ್ಯಾಂಕ್ ಅಧಿಕಾರಿ ಪರಮಶಿವಯ್ಯ, ಯು.ಎಸ್. ಲೋಕೇಶ್, ವೆಂಕಟೇಶ್ ನಾಗನೂರ ಬೆಳಗಾವಿ, ಕಿತ್ತೂರು ರಾಣಿ ಚೆನ್ನಮ್ಮ ಜ್ಯೋತಿ ಸಮಿತಿಯ ಮಹದೇವಪ್ಪ ಕುಟ್ಟಿ, ಗಿರೀಶ್ ಅವಳೆ. ವಿನಾಯಕ ಲೋಟಗಿ. ಸೋಮಲಿಂಗ ದೊಡ್ಡವಾಡ ಮತ್ತಿತರರು ಪಾಲ್ಗೊಂಡಿದ್ದರು.

ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವ ಸುನಿಲ್ ಕುಮಾರ್ ಅವರು ಅ.2 ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದ ಮುಂಭಾಗದಿಂದ ಪ್ರಥಮ ಬಾರಿಗೆ ಚಾಲನೆ ನೀಡಿರುವ ಕಿತ್ತೂರು ರಾಣಿ ಚೆನ್ನಮ್ಮ ವಿಜಯ ಜ್ಯೋತಿ ರಥಯಾತ್ರೆಯು ಕೋಲಾರ, ರಾಮನಗರ ಮತ್ತು ಮಂಡ್ಯ ಮಾರ್ಗವಾಗಿ ಹಾಸನ ಜಿಲ್ಲೆಗೆ ಆಗಮಿಸಿತು. ಕಿತ್ತೂರಿನಲ್ಲಿ ಅ.22 ರಿಂದ 24 ರವರೆಗೆ ನಡೆಯುವ ರಾಜ್ಯ ಮಟ್ಟದ ಕಿತ್ತೂರು ಉತ್ಸವದ ಅಂಗವಾಗಿ ಈ ರಥಯಾತ್ರೆ ಹಮ್ಮಿಕೊಳ್ಳಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net