ಕಿತ್ತೂರು ರಾಣಿ ಚನ್ನಮ್ಮ ಆದರ್ಶ ಎಲ್ಲರಿಗೂ ಸ್ಫೂರ್ತಿ

23rajesh6
Published on

ಚಾಮರಾಜನಗರ: ಬ್ರಿಟಿಷರ ವಿರುದ್ಧ ದೇಶದ ರಕ್ಷಣೆಗಾಗಿ ಕೆಚ್ಚೆದೆಯಿಂದ ಹೋರಾಡಿದ ವೀರನಾರಿ ಕಿತ್ತೂರು ರಾಣಿ ಚನ್ನಮ್ಮ ಅವರ ಧೈರ್ಯ, ಸಾಹಸ, ಆದರ್ಶಗಳು ಎಲ್ಲರಿಗೂ ಸ್ಫೂರ್ತಿಯಾಗಿವೆ ಎಂದು ಜಿಲ್ಲಾಧಿಕಾರಿ ಶಿಲ್ಪಾನಾಗ್ ತಿಳಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಬುಧವಾರ ಆಯೋಜಿಸಲಾಗಿದ್ದ ಕಿತ್ತೂರು ರಾಣಿ ಚನ್ನಮ್ಮ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ, ಚನ್ನಮ್ಮ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದರು.

ಕರ್ನಾಟಕಕ್ಕೆ, ಕನ್ನಡಕ್ಕೆ ಕಿತ್ತೂರು ರಾಣಿ ಚನ್ನಮ್ಮ ಅವರ ಕೊಡುಗೆ ಅಪಾರವಾಗಿದೆ. ದೇಶಪ್ರೇಮಿಯಾಗಿದ್ದ ರಾಣಿ ಚನ್ನಮ್ಮ ನಾಡು, ನುಡಿಯ ಬಗ್ಗೆ ಗೌರವ ಹೊಂದಿದ್ದರು. ದೇಶದ ಜನರ ರಕ್ಷಣೆಗಾಗಿ ತನ್ನ ಪ್ರಾಣದ ಹಂಗನ್ನು ತೊರೆದು ಬ್ರಿಟಿಷರ ವಿರುದ್ಧ ಹೋರಾಡಿದ ದಿಟ್ಟ ಮಹಿಳೆ ಚನ್ನಮ್ಮ ಅವರ ಧೈರ್ಯ, ಶೌರ್ಯ, ಸಾಹಸಗಾಥೆ ಎಲ್ಲ ಮಹಿಳೆಯರಿಗೂ ಮಾದರಿಯಾಗಿದೆ ಎಂದು ತಿಳಿಸಿದರು.

ಕಿತ್ತೂರು ರಾಣಿ ಚನ್ನಮ್ಮ ಅವರ ಆದರ್ಶಗಳನ್ನು ಪ್ರತಿಯೊಬ್ಬರೂ ಪಾಲಿಸುವ ಮೂಲಕ ಸರ್ಕಾರಿ ನೌಕರರು ಜನಸಾಮಾನ್ಯರಿಗೆ ಸೌಲಭ್ಯಗಳನ್ನು ದೊರಕಿಸುವ ನಿಟ್ಟಿನಲ್ಲಿ ಉತ್ತಮ ಆಡಳಿತದ ವಾತಾವರಣ ಕಲ್ಪಿಸಬೇಕು. ನಿಗದಿತ ಗುರಿ ಸಾಧನೆಗೆ ಎಲ್ಲರೂ ಕಾರ್ಯೋನ್ಮುಖರಾಗಬೇಕು. ಅದೇ ರಾಣಿ ಚನ್ನಮ್ಮ ಅವರಿಗೆ ನಾವು ಸಲ್ಲಿಸುವ ಗೌರವವಾಗಿದೆ ಎಂದು ಹೇಳಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದ, ತಹಸೀಲ್ದಾರ್ ಗಿರೀಜಾ, ಜಿಲ್ಲಾ ಪಂಚಾಯಿತಿ ಸಹಾಯಕ ಕಾರ್ಯದರ್ಶಿ ಶ್ರೀಕಂಠರಾಜೇ ಅರಸ್, ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕ ರಾಜು, ಜಿಲ್ಲಾಮಟ್ಟದ ಅಧಿಕಾರಿಗಳು, ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net