

ಚನ್ನಮ್ಮನ ಕಿತ್ತೂರು: ಪ್ರಧಾನಿ ನರೇಂದ್ರ ಮೋದಿ ಅವರು ಐತಿಹಾಸಿಕ ಕಿತ್ತೂರು ಮೇಲೆ ವಿಶೇಷ ಕಾಳಜಿಯನ್ನು ಹೊಂದಿದ್ದು, ಈ ಸಲದ ಉತ್ಸವಕ್ಕೆ ಪ್ರಧಾನಿಗಳನ್ನು ಹಾಗೂ ಕಿತ್ತೂರು ಮಹಿಳಾ ಶೌರ್ಯದ ಪ್ರತೀಕವಾದ್ದರಿಂದ ರಾಷ್ಟ್ರಪತಿ ದ್ರೌಪದಿ ಮುರ್ಮ ಅವರನ್ನು ಆಹ್ವಾನಿಸಲಾಗುವುದು ಎಂದು ಶಾಸಕ ಮಹಾಂತೇಶ ದೊಡಗೌಡರ ಹೇಳಿದರು.
ಸ್ಥಳೀಯ ವೀರಭದ್ರೇಶ್ವರ ಕಲ್ಯಾಣ ಮಂಟಪದ ಸಭಾ ಭವನದಲ್ಲಿ ಜಿಲ್ಲಾ ಮಟ್ಟದಲ್ಲಿನ ಕಿತ್ತೂರು ಉತ್ಸವವನ್ನು ರಾಜ್ಯಮಟ್ಟದ ಉತ್ಸವನ್ನಾಗಿ ಉನ್ನತಿಕರಿಸುವ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಸೋಮವಾರ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. ಪ್ರಧಾನಿಗಳು ಸ್ವಾತಂತ್ರೃ ಅಮೃತ ಮಹೋತ್ಸವ ಆಚರಿಸಲು ಕಿತ್ತೂರನ್ನು ಆಯ್ಕೆ ಮಾಡಿದ್ದರು. ಆ.15 ರ ಭಾಷಣದಲ್ಲಿ ಚನ್ನಮ್ಮಾಜಿಯನ್ನು ಸ್ಮರಿಸಿದರು. ಹೀಗೆ ಕಿತ್ತೂರ ಮೇಲೆ ಅವರ ಪ್ರೇಮ ಸ್ಮರಣೀಯವಾಗಿದೆ ಎಮದರು.
ಮುಖ್ಯಮಂತ್ರಿಗಳು ಕೂಡ ವಿಶೇಷ ಕಾಳಜಿ ವಹಿಸಿ ಜಿಲ್ಲಾ ಉತ್ಸವವಾಗಿದ್ದ ಇದನ್ನು ರಾಜ್ಯ ಉತ್ಸವನ್ನಾಗಿಸಿದ್ದಾರೆ. ಇದಕ್ಕೆ ಬೇಕಾಗುವ 5 ಕೋಟಿ ರೂ. ಅನುದಾನದ ಬೇಡಿಕೆ ಇಟ್ಟಿದ್ದು, 5 ಅಥವಾ 6 ದಿನಗಳವರೆಗೆ ಉತ್ಸವವನ್ನು ವಿವಿಧ ವೇದಿಕೆಗಳ ಮೂಲಕ ಆಚರಿಸಲು ಸರ್ಕಾರದ ಜತೆ ಸುದೀರ್ಘ ಚರ್ಚೆ ನಡೆಸಲಾಗುವುದು ಎಂದರು.
ಕೋಟೆ ಪ್ರತಿರೂಪ ನಿರ್ಮಾಣ ಕುರಿತು ಮಾತನಾಡಿದ ಶಾಸಕರು, ಜನರ ಅಪೇಕ್ಷೆಯಂತೆ ಈಗಿರುವ ಕೋಟೆ ಹತ್ತಿರದಲ್ಲಿಯೇ ಚನ್ನಮ್ಮಾಜಿ ಕೋಟೆಯ ಪ್ರತಿರೂಪ ನಿರ್ಮಾಣಕ್ಕೆ ಮುಖ್ಯಮಂತ್ರಿಗಳಲ್ಲಿ ಬೇಡಿಕೆ ಇಟ್ಟಿದ್ದು, ಇದಕ್ಕೆ ಮುಖ್ಯಮಂತ್ರಿಗಳು ಒಲುವು ತೋರಿದ್ದು, ಆದಷ್ಟು ಬೇಗ ಇದರ ಬಗ್ಗೆ ನಿರ್ಣಯ ತೆಗೆದುಕೊಳ್ಳುತ್ತೇನೆ. ಸಂತೋಷದ ಸಂದೇಶ ನೀಡುತ್ತೇನೆ ಎಂದರು.
ಅಪರ ಜಿಲ್ಲಾಧಿಕಾರಿ ಅಶೋಕ ಗುಡಗುಂಟಿ ಮಾತನಾಡಿ, ರಾಜ್ಯ ಮಟ್ಟದ ಉತ್ಸವಕ್ಕೆ ಬೇಕಾಗುವ ಎಲ್ಲ ತಯಾರಿಗಳನ್ನು ಮಾಡಿಕೊಳ್ಳಲಾಗುವುದು ಎಂದು ಹೇಳಿದರು.
ರಾಜಗುರು ಸಂಸ್ಥಾನ ಕಲ್ಮಠದ ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ ಮಾತನಾಡಿ, ಕಿತ್ತೂರು ಉತ್ಸವದಲ್ಲಿ ರಾಷ್ಟ್ರಮಟ್ಟದಲ್ಲಿ ಖ್ಯಾತಿ ಪಡೆದ ಮಹಿಳೆಯನ್ನು ಸನ್ಮಾನಿಸಿ ಚನ್ನಮ್ಮಾಜಿ ಪ್ರಶಸ್ತಿಯನ್ನು ಉತ್ಸವದಲ್ಲಿಯೇ ನೀಡುವಂತೆ ಕ್ರಮ ಕೈಗೊಳ್ಳಬೇಕೆಂದು ಶಾಸಕರನ್ನು ಒತ್ತಾಯಿಸಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕಿ ವಿದ್ಯಾವತಿ ಭಜಂತ್ರಿ, ಪ್ರಕಾಶ ಮಿತಾಲಿ, ಚಂದ್ರಗೌಡ ಪಾಟೀಲ, ಬಸವರಾಜ ಸಂಗೊಳ್ಳಿ, ಎಂ.ಎಫ್.ಜಕಾತಿ, ಅಜ್ಜಪ್ಪ ಪತ್ತಾರ, ಶ್ರೀಕಾಂತ ದಳವಾಯಿ, ಅನಿಲ ಎಮ್ಮಿ ಇತರರು ಇದ್ದರು.