

ಚನ್ನಮ್ಮನ ಕಿತ್ತೂರು: ಸರ್ಕಾರದಿಂದ ಕಿತ್ತೂರು ಅಭಿವೃದ್ಧಿ ಪ್ರಾಧಿಕಾರದ ಕ್ರಿಯಾಯೋಜನೆಗೆ ಅನುಮತಿ ದೊರೆಯುತ್ತಿದ್ದಂತೆ ವಿವಿಧ ಕಾಮಗಾರಿಗಳಿಗೆ ಶಾಸಕ ಮಹಾಂತೇಶ ದೊಡಗೌಡರ ಸೋಮವಾರ ಭೂಮಿಪೂಜೆ ನೆರವೇರಿಸಿದರು.
1.50 ಕೋಟಿ ರೂ. ವೆಚ್ಚದಲ್ಲಿ ಗಡಾದ ಮರಡಿಯಲ್ಲಿ ಐತಿಹಾಸಿಕ ಧ್ವಜ ಸ್ತಂಭದ ಕಾಮಗಾರಿಗೆ ಸೋಮವಾರ ಭೂಮಿಪೂಜೆ ಸಲ್ಲಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರ ಕಿತ್ತೂರು ಕ್ಷೇತ್ರದ ಅಭಿವೃದ್ಧಿಗೆ ಸದಾ ಬೆಂಬಲವಾಗಿ ನಿಂತಿದೆ. ಕಿತ್ತೂರು ಕ್ಷೇತ್ರದ ಅಭಿವೃದ್ಧಿ ಜತೆಗೆ ಇಲ್ಲಿಯ ಜನರ ನಾಡಿಮಿಡಿತ ಅರಿತು ಅನುದಾನ ಬಿಡುಗಡೆ ಮಾಡಿದೆ ಎಂದರು.
ಅರಮನೆಯ ಮರು ನಿರ್ಮಾಣಕ್ಕಾಗಿ 113 ಕೋಟಿ ರೂ. ಮೀಸಲಿಡಲಾಗಿದೆ. ಅಲ್ಲದೆ ಈಗೀರುವ ಕೋಟೆಯ ನವೀಕರಣ, ವಸ್ತುಪ್ರದರ್ಶನ ಹಾಗೂ ಇತರೆಯಾಗಿ 27 ಕೋಟಿ ರೂ., ಗಡಾದ ಮರಡಿಯ ಐತಿಹಾಸಿಕ ಧ್ವಜ ಸ್ತಂಬಕ್ಕೆ 1.80 ಕೋಟಿ ರೂ. ಹಾಗೂ ಚೌಕಿಮಠದ ನವೀಕರಣಕ್ಕಾಗಿ 50 ಲಕ್ಷ ರೂ., ಚೌಕಿಮಠದ ಪಕ್ಕದ ಜಾಗದಲ್ಲಿ 7.50 ಕೋಟಿ ರೂ. ವೆಚ್ಚದಲ್ಲಿ ಕಲಾಭವನ ನಿರ್ಮಿಸಲಾಗುವುದು ಎಂದು ಹೇಳಿದರು. ಶಾಸಕರ ಅನುದಾನದಡಿಯಲ್ಲಿ ಇಲ್ಲಿಯ ಕಿನಾವಿವ ಸಂಘದ ಕಾಲೇಜಿಗೆ ಕಲಾಭವನ ನಿರ್ಮಾಣಕ್ಕಾಗಿ 10 ಲಕ್ಷ ರೂ. ಅನುದಾನ ನೀಡುವ ಮೂಲಕ ಭೂಮಿಪೂಜೆ ನೆರವೇರಿಸಲಾಯಿತು. ರಾಜಗುರು ಸಂಸ್ಥಾನ ಕಲ್ಮಠದ ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ, ನಿಚ್ಚಣಕಿಯ ಗುರು ಮಡಿವಾಳೇಶ್ವರ ಮಠದ ಪಂಚಾಕ್ಷರಿ ಸ್ವಾಮೀಜಿ, ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಉಳವಪ್ಪ ಉಳ್ಳೆಗಡ್ಡಿ, ಸಿ.ಎಸ್.ಮೋಕಾಶಿ, ಜಗದೀಶ ವಸದ, ನಿಜಲಿಂಗಯ್ಯ ಹಿರೇಮಠ, ಬಸವನಗೌಡ ಸಿದ್ರಾಮನಿ, ನ್ಯಾಯವಾದಿ ವಿಶ್ವನಾಥ ಬಿಕ್ಕಣ್ಣವರ, ಸಿಪಿಐ ಮಹಾಂತೇಶ ಹೊಸಪೇಟ, ಮಹಿಳಾ ಮಂಡಳದ ಅಧ್ಯಕ್ಷೆ ಉಮಾದೇವಿ ಬಿಕ್ಕಣ್ಣವರ ಇದ್ದರು.