ಕಿತ್ತುಬರುತ್ತಿದೆ ಡಾಂಬರು

13ark1
Published on

ಅರಕಲಗೂಡು: ತಾಲೂಕಿನ ಸಾಲುಕೊಪ್ಪಲು-ಬಾಣದಹಳ್ಳಿ ಹಾಗೂ ಗರೀಘಟ್ಟ ಮಾರ್ಗದ ರಸ್ತೆಗೆ ಹೊಸದಾಗಿ ಹಾಕಿರುವ ಡಾಂಬರು ಕಿತ್ತುಬರುತ್ತಿದ್ದು, ಕಳಪೆ ಕಾಮಗಾರಿಗೆ ಸಾಕ್ಷಿಯಾಗಿದೆ.

ಕಳೆದ ಹಲವಾರು ವರ್ಷಗಳಿಂದ ದುರಸ್ತಿ ಕಾಣದೆ ಹದಗೆಟ್ಟು ಹೋಗಿದ್ದ ಸಾಲುಕೊಪ್ಪಲು-ಬಾಣದಹಳ್ಳಿ ಹಾಗೂ ಗರೀಘಟ್ಟ ಮಾರ್ಗದ ರಸ್ತೆ ಸಾರ್ವಜನಿಕರು ಸಂಚರಿಸಲು ಕೂಡ ಸಾಧ್ಯವಾಗದೆ, ವಾಹನಗಳ ಓಡಾಟಕ್ಕೆ ನರಕ ಸದೃಶ್ಯವಾಗಿತ್ತು. ಇದೀಗ ರಸ್ತೆ ಅಭಿವೃದ್ಧಿ ಕಂಡರೂ ಕಳಪೆ ಕಾಮಗಾರಿ ಪರಿಣಾಮ ಮತ್ತೆ ಹದಗೆಟ್ಟು ಹೋಗಿದೆ.

ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯಡಿ 2.20 ಕೋಟಿ ರೂ. ವೆಚ್ಚದಲ್ಲಿ ರಸ್ತೆಗೆ ಕಳೆದ ಮೂರು ತಿಂಗಳ ಹಿಂದಷ್ಟೇ ಡಾಂಬರು ಹಾಕಲಾಗಿತ್ತು. ಕಳಪೆಯಿಂದಾಗಿ ಅಲ್ಲಲ್ಲಿ ಡಾಂಬರು ಕಿತ್ತು ಜಲ್ಲಿಕಲ್ಲುಗಳು ಮೇಲೆದ್ದಿವೆ. ರಸ್ತೆ ಮತ್ತೆ ಹಾಳಾಗಿ ವಾಹನಗಳ ಓಡಾಟಕ್ಕೆ ತೊಂದರೆಯಾಗಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಾಮಗಾರಿಗಳಲ್ಲಿ ಗುಣಮಟ್ಟ ಕಾಪಾಡುವಂತೆ ಶಾಸಕರು ಸಭೆ ಸಮಾರಂಭಗಳಲ್ಲಿ ಮಾರುದ್ದದ ಭಾಷಣ ಬಿಗಿಯುತ್ತಾರೆ. ಆದರೆ, ಗುತ್ತಿಗೆದಾರರು ಮತ್ತು ಇಂಜಿನಿಯರ್‌ಗಳು ಕಳಪೆ ಕಾಮಗಾರಿ ನಡೆಸುವುದು ಮಾತ್ರ ಎಗ್ಗಿಲ್ಲದೆ ಸಾಗಿದೆ. ಶಾಸಕರು ಮೌನಕ್ಕೆ ಶರಣಾಗದೆ ಕಳಪೆ ಕಾಮಗಾರಿ ನಡೆಸಿದ ಗುತ್ತಿಗೆದಾರ ಮತ್ತು ಇಂಜಿನಿಯರ್ ವಿರುದ್ಧ ಕ್ರಮ ಜರುಗಿಸಿ ರಸ್ತೆಗೆ ಮರು ಡಾಂಬರೀಕರಣ ನಡೆಸಿ ಅಭಿವೃದ್ಧಿ ಪಡಿಸಬೇಕು ಎಂದು ಜನತೆ ಆಗ್ರಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net