

ಲಕ್ಷ್ಮೇಶ್ವರ: ಲಕ್ಷ್ಮೇಶ್ವರ-ಅಕ್ಕಿಗುಂದ ಮಧ್ಯದ ದೊಡ್ಡ ಹಳ್ಳಕ್ಕೆ ಅಡ್ಡಲಾಗಿ ಕಟ್ಟಲಾದ ಚೆಕ್ಡ್ಯಾಂನ ತಡೆಗೋಡೆಗಳು ಮುಂಗಾರಿನ ಮೊದಲ ಮಳೆಗೆ ಕಿತ್ತು ಹೋಗಿವೆ. ಇದರಿಂದ ಹಳ್ಳದ ನೀರು ಪಕ್ಕದ ಜಮೀನುಗಳಿಗೆ ನುಗ್ಗಿದ್ದರಿಂದ ಮಣ್ಣು ಕೊಚ್ಚಿ ಹೋಗಿದ್ದು ರೈತರು ಸಂಕಷ್ಟ ಅನುಭವಿಸುವಂತಾಗಿದೆ.
ಮೂರ್ನಾಲ್ಕು ವರ್ಷಗಳ ಹಿಂದೆ ಗೊಜನೂರಿನಿಂದ ಸಂಕದಾಳವರೆಗಿನ ದೊಡ್ಡ ಹಳ್ಳಕ್ಕೆ ಸಣ್ಣ ನೀರಾವರಿ ಇಲಾಖೆಯಿಂದ 12 ಕೋಟಿ ರೂ. ಅನುದಾನದಲ್ಲಿ 18 ಸಿರೀಜ್ ಚೆಕ್ಡ್ಯಾಂಗಳನ್ನು ನಿರ್ವಿುಸಲಾಗಿತ್ತು. ಕಳೆದ ವರ್ಷ ಮುಂಗಾರಿನಲ್ಲಿಯೇ ಸುರಿದ ಮಳೆಗೆ ಬಾಂದಾರದ ಹಿನ್ನೀರಿನ ತಡೆಗಾಗಿ ನಿರ್ವಿುಸಿದ್ದ ತಡೆಗೋಡೆಗಳು ಕಿತ್ತು ನೀರು ಪಕ್ಕದ ಜಮೀನುಗಳಿಗೆ ನುಗ್ಗಿ ಮಣ್ಣು ಕೊಚ್ಚಿ ಹೋಗಿತ್ತು. ಕಳಪೆ ಕಾಮಗಾರಿಯ ಪರಿಣಾಮ ಈ ಅವಘಡ ಸಂಭವಿಸುತ್ತಿದೆ. ಮಣ್ಣು ಕೊಚ್ಚಿ ಹೋಗಿ ಮುಂದಿನ ಚೆಕ್ ಡ್ಯಾಂಗಳಲ್ಲಿ ಸಂಗ್ರಹವಾಗಿ ಬಹುತೇಕ ಚೆಕ್ಡ್ಯಾಂಗಳು ಹೂಳು, ಮುಳ್ಳು-ಕಂಟಿಗಳಿಂದ ತುಂಬಿ ನೀರು ನಿಲ್ಲದಂತಾಗಿವೆ.
ಪ್ರತಿ ಮಳೆಗಾಲದಲ್ಲೂ ಜಮೀನುಗಳಿಗೆ ನೀರು ನುಗ್ಗಿ ಮಣ್ಣು ಕೊಚ್ಚಿ ಹೋಗುವುದರಿಂದ ಇದ್ದ ಅಲ್ಪಸ್ವಲ್ಪ ಜಮೀನು ಕಳೆದುಕೊಂಡು ಸಂಕಷ್ಟ ಅನುಭವಿಸಬೇಕಾಗುತ್ತದೆ. ಈ ಬಗ್ಗೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ದುಂಬಾಲು ಬಿದ್ದಾಗ ಕಾಟಾಚಾರಕ್ಕೆಂಬಂತೆ ಜೆಸಿಬಿಯಿಂದ ಹಳ್ಳದಲ್ಲಿನ ಮರಳು ಮಿಶ್ರಿತ ಮಣ್ಣಿನ ಬದುವು ನಿರ್ಮಾಣ ಮಾಡುತ್ತಾರೆ. ಆದರೆ, ಇದು ಮೊದಲ ಮಳೆಗೆ ಕೊಚ್ಚಿ ಹೋಗುತ್ತದೆ. ಆದ್ದರಿಂದ ಬಾಂದಾರಕ್ಕೆ ಹೊಂದಿಕೊಂಡು ಸಿಮೆಂಟ್ನಿಂದ ತಡೆಗೋಡೆ ನಿರ್ವಿುಸಿದರೆ ಮಾತ್ರ ನಾವು ಬದುಕುವಂತಾಗುತ್ತದೆ ಎನ್ನುವುದು ರೈತರಾದ ಈಶ್ವರಯ್ಯ ಹಿರೇಮಠ, ಸಹದೇವಪ್ಪ ಹರಿಜನ, ಮಾರ್ತಾಂಡಪ್ಪ ಮುಳಗುಂದ, ಗೋವಿಂದರಡ್ಡಿ ರಡ್ಡೇರ, ಸಿದ್ದಪ್ಪ ಮುಳಗುಂದ, ನಿಂಗರಡ್ಡಿ ರಡ್ಡೇರ, ಕಿರಣ ದೊಡ್ಡಮನಿ ಇತರರು ಆಗ್ರಹವಾಗಿದೆ.
ಚೆಕ್ಡ್ಯಾಂನ ತಡೆಗೋಡೆಗಳು ಕಿತ್ತು ಜಮೀನಿಗೆ ನೀರು ನುಗ್ಗುತ್ತಿರುವ ಬಗ್ಗೆ ಸ್ಥಳ ಪರಿಶೀಲಿಸಲಾಗಿದೆ. ದುರಸ್ತಿ ಮತ್ತು ನಿರ್ವಹಣೆಗಾಗಿ ಮೂಲ ಗುತ್ತಿಗೆದಾರರಿಗೆ ತಿಳಿಸಲಾಗಿದೆ. ರೈತರ ಬೇಡಿಕೆಯಂತೆ ಚೆಕ್ಡ್ಯಾಂನ ಎರಡೂ ಬದಿ ಕಾಂಕ್ರೀಟ್ನಿಂದ ತಡೆಗೋಡೆ ನಿರ್ವಿುಸುವ ಬಗ್ಗೆ ಹೆಚ್ಚುವರಿ ಅನುದಾನಕ್ಕಾಗಿ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಅನುದಾನ ಬಂದ ಕೂಡಲೆ ಕಾಮಗಾರಿಗೆ ಟೆಂಡರ್ ಕರೆಯಲಾಗುತ್ತದೆ. | ವಿಜಯಕುಮಾರ ಎಇಇ ಸಣ್ಣ ನೀರಾವರಿ ಇಲಾಖೆ