

ಮುಂಡಗೋಡ: ಧರ್ಮಸ್ಥಳ ಹಾಗೂ ಅಲ್ಲಿನ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರ ಕುರಿತು ಸಾಮಾಜಿಕ ಜಾಲ ತಾಣಗಳಲ್ಲಿ ಅವಹೇಳನಕಾರಿಯಾಗಿ ಮಾತನಾಡಿ ಪೂಜ್ಯರ ಬಗ್ಗೆ ಜನರಲ್ಲಿ ಅಪನಂಬಿಕೆ ಹುಟ್ಟಿಸಲು ಯತ್ನಿಸುತ್ತಿರುವ ಕಿಡಿಗೇಡಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಧರ್ಮಸ್ಥಳ ಭಕ್ತರು ಪಟ್ಟಣದ ಮಾರಿಕಾಂಬಾ ದೇವಸ್ಥಾನದಿಂದ ಶಿವಾಜಿ ವೃತ್ತದವರೆಗೆ ಬೃಹತ್ ಪ್ರತಿಭಟನೆ ನಡೆಸಿ ಕಂದಾಯ ಇಲಾಖೆಯ ಅಧಿಕಾರಿ ಮೂಲಕ ಮುಖ್ಯಮಂತ್ರಿಗೆ ಸೋಮವಾರ ಮನವಿ ಸಲ್ಲಿಸಿದರು.
ಧರ್ಮಸ್ಥಳ ಹಿಂದು ಜನರ ಭಕ್ತಿ ಕೇಂದ್ರವಾಗಿದೆ. ಅನಾಮಿಕ ವ್ಯಕ್ತಿಯೊಬ್ಬ ನೀಡಿದ ಹೇಳಿಕೆ ಆರೋಪದಡಿ ಸರ್ಕಾರವು ಎಸ್ಐಟಿ ಮೂಲಕ ತನಿಖೆ ನಡೆಸುತ್ತಿರುವುದನ್ನು ಕ್ಷೇತ್ರದ ಭಕ್ತರಾದ ನಾವು ಗೌರವಿಸುತ್ತೇವೆ. ಈ ಕ್ಷೇತ್ರದ ಮೇಲೆ ನಿರಂತರವಾಗಿ ಸುಳ್ಳು ಆರೋಪಗಳನ್ನು ಮಾಡುತ್ತಿರುವುದು ನೋವನ್ನುಂಟು ಮಾಡುತ್ತಿದೆ. ನಮ್ಮ ಧಾರ್ವಿುಕ ಭಾವನೆಗಳಿಗೆ ಧಕ್ಕೆ ತರುವ ಪ್ರಯತ್ನ ಮಾಡುತ್ತಿದ್ದಾರೆ. ಇವರ ಆರೋಪಗಳು ಸುಳ್ಳು ಎಂದು ಸ್ಪಷ್ಟವಾಗಿ ಕಾಣಿಸುತ್ತಿದ್ದು, ಈ ಅಪಪ್ರಚಾರದ ಹಿಂದಿರುವ ಗಿರೀಶ ಮಟ್ಟೆನ್ನವರ, ಜಯಂತ ಟಿ., ಮಹೇಶ ಶೆಟ್ಟಿ ಹಾಗೂ ಅವರ ಅನುಯಾಯಿಗಳನ್ನು ತೀವ್ರ ತನಿಖೆಗೆ ಒಳಪಡಿಸಬೇಕು ಹಾಗೂ ಸಾಕ್ಷಿಯಿದೆ ಎಂದು ಹೇಳುವ ಅವರನ್ನು ಮಂಪರು ಪರೀಕ್ಷೆಗೆ ಒಳಪಡಿಸಿ ಸತ್ಯಾಂಶ ಹೊರ ತರಬೇಕು ಹಾಗೂ ಈಗಿನ ಎಸ್ಐಟಿ ತಂಡವನ್ನು ಬಿಟ್ಟು ಬೇರೆ ಎಸ್ಐಟಿ ತಂಡ ರಚಿಸಬೇಕು ಹಾಗೂ ಕ್ಷೇತ್ರದ ಬಗ್ಗೆ ಅವಹೇಳನವಾಗಿ ಸಾಮಾಜಿಕ ಜಾಲ ತಾಣಗಳ ಮೇಲೆ ಕ್ರಮ ವಹಿಸಬೇಕು ಎಂದು ಅವರು ಆಗ್ರಹಿಸಿ ತಹಸೀಲ್ದಾರ್ ಕಚೇರಿ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.
ವಿವಿಧ ಸಂಘಟನೆಗಳ ಮುಖಂಡರು ಹಾಗೂ ಧರ್ಮಸ್ಥಳ ಭಕ್ತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.