ಕಿಟ್ ವಿತರಣೆಯಲ್ಲಿ ರಾಜಕೀಯ; ಶಾಸಕರ ವಿರುದ್ಧ ಸ್ಥಳೀಯ ಬಿಜೆಪಿ, ಜೆಡಿಎಸ್ ಮುಖಂಡರ ಪ್ರತಿಭಟನೆ

dbp must.
Published on

ದೊಡ್ಡಬಳ್ಳಾಪುರ ಗ್ರಾಮಾಂತರ: ತಾಲೂಕಿನ ಸಾಸಲು ಹೋಬಳಿ ಹೊಸಹಳ್ಳಿ ಗ್ರಾಮ ಪಂಚಾಯಿತಿ ಆವರಣದಲ್ಲಿ ದಿನಸಿ ಕಿಟ್ ವಿತರಣೆಯಲ್ಲಿ ಶಾಸಕ ಟಿ.ವೆಂಕಟರಮಣಯ್ಯ ತಾರತಮ್ಯ ಮಾಡುತ್ತಿದ್ದಾರೆ ಎಂದು ಸ್ಥಳೀಯ ಬಿಜೆಪಿ, ಜೆಡಿಎಸ್ ಮುಖಂಡರು ಪ್ರತಿಭಟನೆ ನಡೆಸಿದರು. ಬೆಂಗಳೂರು ಕಸ ವಿಲೇವಾರಿ ಮಾಡುತ್ತಿರುವ ಗ್ರಾಪಂ ವ್ಯಾಪ್ತಿಗೆ ಬಿಬಿಎಂಪಿಯಿಂದ ಆಹಾರ ಕಿಟ್ ನೀಡಲಾಗಿತ್ತು. ಶುಕ್ರವಾರ ಗ್ರಾಪಂ ಆವರಣದಲ್ಲಿ ವಿತರಣೆಗೆ ತಂದಿದ್ದ 250 ಆಹಾರ ಕಿಟ್ ಪಡೆಯಲು 500ಕ್ಕೂ ಹೆಚ್ಚು ಜನರು ಸೇರಿದ್ದರು. ಶಾಸಕರು ಅವರ ಪಕ್ಷಕ್ಕೆ ಮತ ನೀಡಿದ ಕುಟುಂಬಗಳನ್ನು ಗುರುತಿಸಿ ಅವರಿಗೆ ಟೋಕನ್ ನೀಡಿ ವಿತರಣೆ ಮಾಡುತ್ತಿದ್ದಾರೆ ಎಂದು ಸ್ಥಳದಲ್ಲಿ ಸ್ಥಳೀಯ ಮುಖಂಡರು ಪ್ರತಿಭಟನೆಗೆ ಮುಂದಾದರು. ಈ ನಡುವೆ ಶಾಸಕರ ಬೆಂಬಲಿಗರು, ಜೆಡಿಎಸ್, ಬಿಜೆಪಿ ಮುಖಂಡರು ಸಾಮಾಜಿಕ ಅಂತರ ಮರೆತು ಪರಸ್ಪರ ಮಾತಿನ ಚಕಮಕಿ ನಡೆಸಿದರು. ಸರ್ಕಾರದ ಕಿಟ್ ವಿತರಣೆಯಲ್ಲಿ ಶಾಸಕರ ಹಿಂಬಾಲಕರು ರಾಜಕೀಯ ಬೆರೆಸುತ್ತಿದ್ದಾರೆ ಎಂದು ಸ್ಥಳೀಯ ಗ್ರಾಪಂ ಸದಸ್ಯರಾದ ರೋಹಿಣಿ ಗೋವಿಂದರಾಜು, ಪ್ರಕಾಶ್‌ರೆಡ್ಡಿ ಹಾಗೂ ಮಂಜುಳಾ ಶಿವಣ್ಣ ದೂರಿದರು. ತಿಂಗಳಿನಿಂದ ಈ ಆರೋಪ ತಾಲೂಕಿನಲ್ಲಿ ಕೇಳಿ ಬಂದಿದ್ದು, ಹೊಸಹಳ್ಳಿಯಲ್ಲಿ ಇದರ ಸಲುವಾಗಿ ಮಾತಿನ ಚಕಮಕಿ ತೀವ್ರ ಸ್ವರೂಪ ಪಡೆದು ನೂಕುನುಗ್ಗಲಿನಲ್ಲೇ ದಿನಸಿ ಕಿಟ್ ವಿತರಣೆ ಮಾಡಲಾಗಿದೆ.

ಬಿಬಿಎಂಪಿ ನೀಡಿರುವ ಸರ್ಕಾರದ ದಿನಸಿ ಕಿಟ್ ವಿತರಣೆಯಲ್ಲಿ ಶಾಸಕ ಟಿ.ವೆಂಕಟರಮಣಯ್ಯ ಕಾಂಗ್ರೆಸ್‌ನವರಿಗೆ ವಿತರಿಸುವ ಮೂಲಕ ಹೀನ ರಾಜಕಾರಣ ಮಾಡುತ್ತಿದ್ದಾರೆ. ಫಲಾನುಭವಿಗಳಿಗೆ ನೀಡಲಿ ಎಂಬುದಷ್ಟೇ ನಮ್ಮ ಉದ್ದೇಶ. ಎಚ್.ಎಸ್ ಅಶ್ವತ್ಥನಾರಾಯಣ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಕಸ ವಿಲೇವಾರಿ ಘಟಕ ವ್ಯಾಪ್ತಿಯ 5 ಪಂಚಾಯಿತಿಗಳಿಗೆ ಬಿಬಿಎಂಪಿಯಿಂದ ದಿನಸಿ ಕಿಟ್ ನೀಡಲಾಗುತ್ತಿದೆ. ವಿತರಣೆಯಲ್ಲಿ ದುರುಪಯೋಗ ಕಂಡ ಬಂದಲ್ಲಿ ವಿತರಣೆ ರದ್ದುಪಡಿಸಲಾಗುವುದು, ಹೊಸಹಳ್ಳಿಯಲ್ಲಿ ನೀಡಲಾಗಿರುವ ಬಿಬಿಎಂಪಿ ಕಿಟ್ ಬಗ್ಗೆ ಮಾಹಿತಿ ಪಡೆಯಲಾಗುವುದು. ಬಿ.ಎಚ್ ಅನಿಲ್ ಕುಮಾರ್, ಪೌರಾಯಕ್ತ ಬಿಬಿಎಂಪಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net