

ಶಿವಮೊಗ್ಗ: ಕಿಚ್ಚ ಸುದೀಪ್ ನಟನೆಯ ಬಹುನಿರೀಕ್ಷಿತ ವಿಕ್ರಾಂತ್ ರೋಣ ಸಿನಿಮಾ ಗುರುವಾರ ತೆರೆ ಕಂಡಿದ್ದು ಕಿಚ್ಚನ ತವರು ಜಿಲ್ಲೆ ಶಿವಮೊಗ್ಗದಲ್ಲೂ ಅಭಿಮಾನಿಗಳ ಕ್ರೇಜ್ ಭರ್ಜರಿಯಾಗಿತ್ತು.
ನಗರದ ಎಚ್‌ಪಿಸಿ, ಲಕ್ಷ್ಮೀ ಟಾಕೀಸ್ ಮತ್ತು ಭಾರತ್ ಮಾಲ್‌ನಲ್ಲಿ ಸಿನಿಮಾ ಬಿಡುಗಡೆಯಾಗಿದ್ದು ಕಿಚ್ಚನ ಅಭಿಮಾನಿಗಳಲ್ಲಿ ಸಂಭ್ರಮ ಮನೆ ಮಾಡಿತ್ತು. ಬುಧವಾರ ರಾತ್ರಿಯಿಂದಲೇ ಟಾಕೀಸ್‌ಗಳ ಮುಂದೆ ಕಿಚ್ಚನ ಪೋಸ್ಟರ್‌ಗನ್ನು ನಿಲ್ಲಿಸಿ ಹೂವು, ಹಾಲಿನ ಅಭಿಷೇಕ ಮಾಡಿ ಅಭಿಮಾನ ಮೆರೆದರು. ರಾತ್ರಿ ಮಳೆಯನ್ನೂ ಪಟಾಕಿ ಸಿಡಿಸಿ ಸಂಭ್ರಮಿಸಿದರು.
ಸಿನಿಮಾ ಟಾಕೀಸ್‌ಗಳ ಮುಂದೆ ಮುಂದೆ ಕಿಚ್ಚನ ಭಾರೀ ಗಾತ್ರದ ಕಟೌಟ್‌ಗಳ ಜತೆಗೆ ಅಭಿಮಾನಿಗಳ ಭಾವಚಿತ್ರವುಳ್ಳ ಪೋಸ್ಟರ್‌ಗಳು ರಾರಾಜಿಸುತ್ತಿದ್ದು, ಟಿಕೆಟ್‌ಗಾಗಿ ನೂಕುನುಗ್ಗಲು ಉಂಟಾಯಿತು. ಬೆಳಗ್ಗೆ 7ಕ್ಕೆ ಫ್ಯಾನ್ಸ್ ಶೋ ಆರಂಭಗೊಂಡಿತು. ಫ್ಯಾನ್ಸ್ ಶೋಗೆ ಬೆಳಗ್ಗೆ 5ರಿಂದಲೇ ಟಾಕೀಸ್ ಮುಂದೆ ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ನೆರೆದಿದ್ದರು. ಥಿಯೇಟರ್ ಒಳಗಡೆ ಕರ್ನಾಟಕದ ಬಾವುಟದೊಂದಿಗೆ ವಿಕ್ರಾಂತ್ ರೋಣ ಸಿನಿಮಾವನ್ನು ಅಭಿಮಾನಿಗಳು ಸಂಭ್ರಮಿಸಿದರು. ಇದೇ ವೇಳೆ ಎಚ್‌ಪಿಸಿ ಟಾಕೀಸ್ ಬಳಿ ಅಭಿಮಾನಿಗಳು ಪಲಾವ್ ವಿತರಿಸಿದರು.