ಕಿಕ್ಕೇರಿಸಿಕೊಳ್ಳಲು ಬಾರ್ಡರ್ ಕ್ರಾಸ್

gbd
Published on

ಗೌರಿಬಿದನೂರು: ಮಧ್ಯಾಹ್ನದ ವರೆಗೆ ನಗರದಲ್ಲಿ ಮಾರಾಟಕ್ಕೆ ಅವಕಾಶ ನೀಡದ ಕಾರಣ ಮದ್ಯ ಪ್ರಿಯರು ಬಿಸಿಲ ಧಗೆಯಲ್ಲಿ ಎಣ್ಣೆಗಾಗಿ ಕುದಿಯುತ್ತಿದ್ದರೆ, ದಾಹ ನೀಗಿಸಿಕೊಳ್ಳಲು ಹಲವು ನೆರೆಯ ಆಂಧ್ರದಿಂದ ಬಾರ್ಡರ್ ಕ್ರಾಸ್ ಮಾಡಿದರು.!

ನಗರದಲ್ಲಿ ಕ್ವಾರಂಟೈನ್‌ನಲ್ಲಿರುವವರ ಸಂಖ್ಯೆ ಹೆಚ್ಚಾಗಿದೆ. ತಾಲೂಕು ನೆರೆಯ ಆಂಧ್ರದ ಗಡಿಗೆ ಹೊಂದಿಕೊಂಡಿದ್ದು, ಅಲ್ಲೆ ಸೋಂಕಿತರ ಪ್ರಮಾಣ ಅಧಿಕವಾಗಿದೆ, ಈ ಹಿನ್ನೆಲೆಯಲ್ಲಿ ತಾಲೂಕಿನಲ್ಲಿ ಮದ್ಯ ಮಾರಾಟಕ್ಕೆ ಅವಕಾಶ ನೀಡಬೇಕೆ? ಬೇಡವೆ ಎಂದು ಮೀನಮೇಷ ಎಣಿಸುತ್ತಿದ್ದ ಜಿಲ್ಲಾಡಳಿತ ನಗರದಲ್ಲಿ ಮಾರಾಟಕ್ಕೆ ಅನುಮತಿ ನೀಡಿರಲಿಲ್ಲ.

ಸರ್ಕಾರ ಕೊಟ್ಟರೂ ಜಿಲ್ಲಾಡಳಿತ ಬಿಡುತ್ತಿಲ್ಲ ಎಂದು ಮತ್ತೇರಿಸಿಕೊಳ್ಳಲು ತುದಿಗಾಲಲ್ಲಿ ನಿಂತಿದ್ದವರು ಕೈಕೈ ಹಿಸುಕಿಕೊಂಡರು. ಬಳಿಕ ನಗರದಲ್ಲಿ ಎಣ್ಣೆ ಸಿಗಲ್ಲ ಎಂಬುದು ಖಾತರಿಯಾಗುತ್ತಿದ್ದಂತೆ ಗ್ರಾಮೀಣ ಪ್ರದೇಶದ ಅಂಗಡಿಗಳಿಗೆ ಲಗ್ಗೆಯಿಡಲಾರಂಭಿಸಿದರು.

ಗ್ರಾಮೀಣ ಪ್ರದೇಶದ ಅಂಗಡಿಗಳಲ್ಲಿ ಜನ ಜಂಗುಳಿ ಹೆಚ್ಚಾಗಿದ್ದರಿಂದ ಪೊಲೀಸರು ರಸ್ತೆಗಳಲ್ಲಿ ಚೆಕ್ ಪೋಸ್ಟ್ ಅಳವಡಿಸಿ ಅನವಶ್ಯಕ ಓಡಾಟಕ್ಕೆ ಬ್ರೇಕ್ ಹಾಕುವಷ್ಟರಲ್ಲಿ ಹೈರಾಣಾದರು. ಮಧ್ಯಾಹ್ನದ ವೇಳೆಗೆ ನಗರದಲ್ಲಿ ಮಾರಾಟಕ್ಕೆ ಅನುಮತಿ ನೀಡಿದ್ದರಿಂದ ಎಲ್ಲೆಡೆ ರಂಗೇರಿದ ವಾತಾವರಣ ಕಂಡು ಬಂತು.

ಆಂಧ್ರದಲ್ಲಿ ಮದ್ಯ ಮಾರಾಟಕ್ಕೆ ಅಲ್ಲಿನ ಸರ್ಕಾರ ಅನುಮತಿ ನೀಡದ ಕಾರಣ ಅಲ್ಲಿನ ಮದ್ಯ ಪ್ರಿಯರು ಬಾರ್ಡ್‌ರ್ ಕ್ರಾಸ್ ಮಾಡಿದರು. ಸೋಂಕು ಭೀತಿಯಲ್ಲಿ ಗಡಿ ಭಾಗದಲ್ಲಿ ಅಧಿಕಾರಿಗಳು ತಪಾಸಣೆ ಬಿಗಿಗೊಳಿಸಿದ್ದರು. ಆದಾಗ್ಯೂ ವಾಮ ಮಾರ್ಗಗಳ ಮೂಲಕ ಸ್ನೇಹಿತರು, ಸಂಬಂಧಿಕರ ಮೂಲಕ ಗಡಿಭಾಗದವರೆಗೆ ತರಿಸಿಕೊಳ್ಳುವ ಗಂಡಾಗುಂಡಿ ಕೆಲಸಗಳನ್ನು ಮದ್ಯಪ್ರಿಯರು ಮುಂದುವರಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net