

ಕಿಕ್ಕೇರಿ: ಹೋಬಳಿಯ ವಿವಿಧೆಡೆ ಶುಕ್ರವಾರ ವರಮಹಾಲಕ್ಷ್ಮೀ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು.
ಪಟ್ಟಣದ ಕಿಕ್ಕೇರಮ್ಮ, ಪಾರ್ವತಿದೇವಿಗೆ ವಿಶೇಷವಾಗಿ ಆಭರಣ, ವಸ್ತ್ರ, ಪುಷ್ಪಗಳಿಂದ ಅಲಂಕರಿಸಿ ಪೂಜಿಸಲಾಯಿತು. ದೇವಿಗೆ ಕ್ಷೀರ, ಮಧು, ಶರ್ಕರ(ಸಕ್ಕರೆ), ದಧಿ(ಮೊಸರು), ಗೃಥ(ತುಪ್ಪ)ದಲ್ಲಿ ಅಭಿಷೇಕ ನೆರವೇರಿಸಲಾಯಿತು.
ಭಕ್ತರು ತಮ್ಮ ಮನೆಗಳಲ್ಲಿ ದೇವಿಯ ಮುಖವಾಡವನ್ನು ತೆಂಗಿನಕಾಯಿ ಕಳಶದೊಂದಿಗೆ ಇಟ್ಟು ವಿವಿಧ ವಸ್ತ್ರ, ಆಭರಣಗಳನ್ನು ತೊಡಿಸಿ ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥಿಸಿದರು. ದೇವಿಗೆ ಪ್ರಿಯವಾದ ಕಡಲೆಬೇಳೆ, ಸಿಹಿ ಪೊಂಗಲ್, ಹುಗ್ಗೆ, ಚಕ್ಕುಲಿ, ನಿಪ್ಪಟ್ಟು, ಕೋಡಬಳೆ, ಪಾಯಸ, ವಿವಿಧ ಫಲಗಳ ನೈವೇದ್ಯ ಅರ್ಪಿಸಲಾಯಿತು. ಹೆಣ್ಣು ಮಕ್ಕಳು ಹೊಸ ಉಡುಗೆ ತೊಟ್ಟು ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು.