ಕಿಕ್ಕೇರಮ್ಮನ ಕೊತ್ತಲು ನಿವಾಸಿಗಳಿಗೆ ನಿವೇಶನ ಹಕ್ಕುಪತ್ರ ನೀಡಿ

Published on

ಹೊಳೆನರಸೀಪುರ: ಪಟ್ಟಣದ ವಾರ್ಡ್ ನಂಬರ್ 16ರಲ್ಲಿರುವ ಕಿಕ್ಕೇರಮ್ಮನ ಕೊತ್ತಲು ನಿವಾಸಿಗಳಿಗೆ ಅಕ್ರಮ ಸಕ್ರಮ ಯೋಜನೆ ಅಡಿಯಲ್ಲಿ ಹಕ್ಕುಪತ್ರ ನೀಡುವಂತೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಟಿ.ಲಕ್ಷ್ಮಣ್ ಒತ್ತಾಯಿಸಿದರು.

ಕಿಕ್ಕೇರಮ್ಮನ ಕೊತ್ತಲು ಸುತ್ತಮುತ್ತಲಿನ 3 ಎಕರೆ 30 ಗುಂಟೆ ಭೂಮಿಯನ್ನು ಕೊಳಚೆ ನಿರ್ಮೂಲನ ಮಂಡಳಿಗೆ ವಹಿಸಲು ಮುಂದಾಗಿರುವ ಪುರಸಭೆ ಆಡಳಿತ ಕ್ರಮವನ್ನು ತೀವ್ರವಾಗಿ ಖಂಡಿಸುವುದಾಗಿ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಉತ್ತಮ ಸ್ಥಿತಿಯಲ್ಲಿರುವ ಬಡಾವಣೆಯನ್ನು ಕೊಳಚೆ ನಿರ್ಮೂಲನೆ ಮಂಡಳಿಗೆ ಸೇರ್ಪಡೆ ಮಾಡುವುದರಿಂದ ಮೂಲ ಸೌಕರ್ಯಗಳಿಂದ ವಂಚಿತರಾಗುತ್ತಾರೆ. ಅಲ್ಲಿನ ನಿವಾಸಿಗಳು ಭಾರಿ ನಷ್ಟವಾಗುತ್ತದೆ. ಸಾಲ ಸೌಲಭ್ಯ ಪಡೆಯಲು, ಪರಭಾರೆ ಮಾಡಲು 20 ವರ್ಷಗಳು ಕಾಯಬೇಕಾಗುತ್ತದೆ. ಆದ್ದರಿಂದ ಈ ಕ್ರಮವನ್ನು ಕೂಡಲೇ ಕೈಬಿಡಬೇಕು ಎಂದು ಆಗ್ರಹಿಸಿದರು.

ಈ ಪ್ರದೇಶವನ್ನು ಕೊಳಚೆ ನಿರ್ಮೂಲನ ಮಂಡಳಿಗೆ ವಹಿಸಿಕೊಡುವುದರಿಂದ ಪುರಸಭೆಗೆ ಆರ್ಥಿಕವಾಗಿ ನಷ್ಟವಾಗುತ್ತದೆ. ಈ ನಷ್ಟವನ್ನು ಭರಿಸುವವರು ಯಾರು ಎಂದು ಪ್ರಶ್ನಿಸಿದರು.

ಪುರಸಭೆ ಮಾಜಿ ಅಧ್ಯಕ್ಷ ದಿವಂಗತ ಎಚ್.ಸಿ.ಸಿಂಗ್ರಿಗೌಡರು ಕಿಕ್ಕೇರಮ್ಮನ ಕೊತ್ತಲು ನಿವಾಸಿಗಳಿಗೆ ಹಕ್ಕುಪತ್ರ ನೀಡಲು 28 ಗುಂಟೆ ಪ್ರದೇಶವನ್ನು ಕೊಳಚೆ ನಿರ್ಮೂಲನಾ ಮಂಡಳಿಗೆ ಹಸ್ತಾಂತರಿಸಲು ತೀರ್ಮಾನಿಸಿದ್ದರು. ಈ ಪ್ರದೇಶದಲ್ಲಿ 72 ನಿವೇಶನಗಳಿದ್ದವು, ಈಗ 99 ನಿವೇಶನಗಳು ಹೇಗೆ ಪರಿವರ್ತನೆಗೊಂಡವು ಎಂದು ಪ್ರಶ್ನಿಸಿದರಲ್ಲದೆ, ಕಳೆದ 30 ವರ್ಷಗಳಿಂದಲೂ ಶಾಸಕರು ಸುಮ್ಮನಿದ್ದು ಇದ್ದಕ್ಕಿದ್ದಂತೆ ಈ ವಿಷಯದಲ್ಲಿ ಹೆಚ್ಚಿನ ಆಸಕ್ತಿ ವಹಿಸಿರುವುದು ಹಲವು ಅನುಮಾನಕ್ಕೆ ಕಾರಣವಾಗಿದೆ ಎಂದರು.

ಕಾಂಗ್ರೆಸ್ ಮುಖಂಡ ಎಲ್.ಉಮೇಶ್ ಮಾತನಾಡಿ, ಪುರಸಭೆಗೆ ಆರ್ಥಿಕ ನಷ್ಟ ಉಂಟುಮಾಡಿ ಕೊಳಚೆ ನಿರ್ಮೂಲನ ಮಂಡಳಿಗೆ ಸೇರಿಸಲು ಹೊರಟಿರುವ ಪುರಸಭೆ ಆಡಳಿತದ ವಿರುದ್ಧ ನ್ಯಾಯಾಲಯದ ಮೊರೆ ಹೋಗಲಾಗುವುದು. ಅಕ್ರಮ ಸಕ್ರಮ ಯೋಜನೆ ಅಡಿಯಲ್ಲಿ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಿದರೆ ಅವರಿಗೆ ಮೂಲ ಸೌಲಭ್ಯಗಳು ದೊರೆಯುತ್ತವೆ ಹಾಗೂ ಪುರಸಭೆಗೆ ಆದಾಯ ದೊರೆಯುತ್ತದೆ. ಈ ಕ್ರಮವನ್ನು ಪುರಸಭೆ ಆಡಳಿತ ಕೂಡಲೇ ಕೈಬಿಡಬೇಕು ಎಂದು ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಕೆಡಿಪಿ ನಾಮ ನಿರ್ದೇಶಿತ ಸದಸ್ಯ ಕೆ.ಕೆ.ಲೋಕೇಶ್, ಪುರಸಭಾ ಸದಸ್ಯ ಎಚ್.ಎನ್.ಬೈರಶೆಟ್ಟಿ, ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರ ಸಮಿತಿ ತಾಲೂಕು ಅಧ್ಯಕ್ಷ ಶಿವಕುಮಾರ, ಪಟ್ಟಣದ ಆಶ್ರಯ ಸಮಿತಿ ನಾಮ ನಿರ್ದೇಶಿತ ಸದಸ್ಯ ಗೋವಿಂದರಾಜು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net