ಕಿಂಡಿ ಅಣೆಕಟ್ಟಿಗೆ ಬಂತು ವ್ಯಾಲಿ ನೀರು

21_GBD_HN Valley 02
Published on

ಗೌರಿಬಿದನೂರು : ಎತ್ತಿನಹೊಳೆ ನೀರು ಈ ವರ್ಷ ಹರಿಯುತ್ತೆ, ಮುಂದಿನ ವರ್ಷ ಹರಿಯುತ್ತೆ ಎಂದು ಎದುರು ನೋಡುತ್ತಿದ್ದ ಬಯಲುಸೀಮೆಯ ಗೌರಿಬಿದನೂರು ತಾಲೂಕಿಗೆ ಎಚ್.ಎನ್.ವ್ಯಾಲಿ ನೀರು ಹರಿದಿದೆ. ಇಲ್ಲಿನ ಕಿಂಡಿ ಅಣೆಕಟ್ಟಿಗೆ ಪ್ರಾಯೋಗಿಕವಾಗಿ ಮಂಗಳವಾರ ರಾತ್ರಿಯಿಂದ ನೀರು ಹರಿಸಲಾಗುತ್ತಿದ್ದು, ಬಹುದಿನಗಳ ಕನಸು ನನಸಾಗುವ ದಿನಗಳು ಸಮೀಪಿಸುತ್ತಿರುವ ಆಶಾಭಾವನೆ ಸ್ಥಳೀಯರಲ್ಲಿ ಮನೆ ಮಾಡಿದೆ.

ಚಿಕ್ಕಬಳ್ಳಾಪುರದ ಶ್ರೀನಿವಾಸ ಸಾಗರ ಕೆರೆಯಿಂದ ಪೈಪ್ ಲೈನ್ ಮೂಲಕ ಕಿಂಡಿ ಅಣೆಕಟ್ಟೆಗೆ ಮೊದಲ ಬಾರಿಗೆ ನೀರು ಹರಿಸಲಾಗಿದೆ. ಕೆಲವೇ ದಿನಗಳಲ್ಲಿ ಅಣೆಕಟ್ಟೆಯಿಂದ ಈ ಭಾಗದ ಹತ್ತಾರು ಕೆರೆಗಳಿಗೆ ನೀರು ಹರಿಯಲಿದ್ದು, ಪಾತಾಳ ಸೇರಿರುವ ಅಂತರ್ಜಲವೃದ್ಧಿಯಾಗಿ ಬತ್ತಿದ ಕೊಳವೆಬಾವಿಗಳು ಮರುಜೀವ ಪಡೆಯುವ ಹುಮ್ಮಸ್ಸಿನಲ್ಲಿವೆ.

ಪರ-ವಿರೋಧದ ಪ್ರತಿಭಟನೆಗಳ ನಡುವೆ ಎಚ್.ಎನ್.ವ್ಯಾಲಿ ಯೋಜನೆ ಕಾಮಗಾರಿ ಶೀಘ್ರಗತಿಯಲ್ಲಿ ಪೂರ್ಣಗೊಂಡು ಕಳೆದ ವರ್ಷದ ಫೆಬ್ರವರಿಯಲ್ಲಿ ಚಿಕ್ಕಬಳ್ಳಾಪುರದ ಕಂದವಾರದ ಕೆರೆಗೆ ಹರಿಸಲಾಗಿತ್ತು. ಆದರೆ ಪೈಪ್‌ಲೈನ್ ಕಾಮಗಾರಿ ಪೂರ್ಣಗೊಳ್ಳದ ಹಿನ್ನೆಲೆಯಲ್ಲಿ ಗೌರಿಬಿದನೂರಿನ ಕಿಂಡಿ ಅಣೆಕಟ್ಟಿನವರೆಗೆ ಹರಿಸಲು ಸಾಧ್ಯವಾಗಿರಲಿಲ್ಲ.

ಕಿಂಡಿ ಅಣೆಕಟ್ಟಿಗೆ ಭೇಟಿ: ಅಣೆಕಟ್ಟೆಗೆ ಮಂಗಳವಾರ ರಾತ್ರಿಯಿಂದ ನೀರು ಹರಿಯುತ್ತಿರುವುದಿಂದ ಬುಧವಾರ ನಗರಸಭೆ ಅಧ್ಯಕ್ಷೆ ಗಾಯತ್ರಿ ಬಸವರಾಜ್, ಪೌರಾಯುಕ್ತ ಸತ್ಯನಾರಾಯಣ, ಸದಸ್ಯರು ಹಾಗೂ ಡಿಸಿಸಿ ಬ್ಯಾಂಕ್ ನಿರ್ದೇಶಕ ಮರಳೂರು ಹನುಮಂತರೆಡ್ಡಿ ಮತ್ತಿತರ ಜನಪ್ರತಿನಿಧಿಗಳು, ರೈತ ಮುಖಂಡರು ಭೇಟಿ ನೀಡಿದರು.

ಮರುಭೂಮಿಯಲ್ಲಿ ಓಯಾಸೀಸ್ : ಬೆಂಗಳೂರಿನ ಚರಂಡಿ ನೀರು ರಾಸಾಯನಿಕ ಲವಣಾಂಶಗಳನ್ನು ಅಧಿಕ ಪ್ರಮಾಣದಲ್ಲಿ ಹೊಂದಿದೆ. ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಲಿದ್ದು, ಈ ನೀರು ಜಿಲ್ಲೆಗೆ ಬೇಡ. ಒಂದೊಮ್ಮೆ ನೀರು ಹರಿಸುವುದಾದರೆ ಮೂರು ಹಂತಗಳಲ್ಲಿ ಸಂಸ್ಕರಿಸಿ ಹರಿಸಬೇಕೆಂದು ಶಾಶ್ವತ ನೀರಾವರಿ ಹೋರಾಟ ಸಮಿತಿ ಹೋರಾಟ ನಡೆಸುತ್ತಿದೆ. ಮತ್ತೊದೆಡೆ ಈ ನೀರು ಕುಡಿಯಲು ಅಲ್ಲ, ಕೆರೆಗಳಿಗೆ ಹರಿಸಿ, ಅಂತರ್ಜಲವೃದ್ಧಿಗೆ ಸೀಮಿತವಾಗಿದೆ. ಇದರಿಂದ ಕೃಷಿಗೆ ಅನುಕೂಲವಾಗಲಿದೆ ಎಂದು ಇನ್ನೊಂದು ಗುಂಪು ಹೇಳುತ್ತಿದೆ. ಪರ-ವಿರೋಧಗಳ ನಡುವೆ ಕೆರೆಗಳಿಗೆ ನೀರು ಹರಿಯುತ್ತಿರುವುದರಿಂದ ಶಾಶ್ವತ ನೀರಾವರಿ ಯೋಜನೆಗಳಿಲ್ಲಿದ ಈ ಭಾಗಕ್ಕೆ ಓಯಾಸೀಸ್ ಸಿಕ್ಕಂತಾಗಿದೆ.

ಎತ್ತಿನಹೊಳೆ ಯಾವಾಗ : ಶಾಶ್ವತ ನೀರಾವರಿ ಸೌಲಭ್ಯ ಕಲ್ಪಿಸಬೇಕೆಂಬ ಹೋರಾಟದ ಫಲವಾಗಿ ಬಹುಕೋಟಿ ವೆಚ್ಚದ ಎತ್ತಿನಹೊಳೆ ಯೋಜನೆಗೆ ಚಾಲನೆ ನೀಡಿ ವರ್ಷಗಳೇ ಕಳೆಯುತ್ತಿದೆ. ಆದರೆ ಅಡೆತಡೆಗಳಿಂದಾಗಿ ಕಾಮಗಾರಿ ಕುಂಟುತ್ತಾ ಸಾಗುತ್ತಿದೆ, ಕೆರಗಳಿಗೆ ನೀರು ತುಂಬಿಸುವ ಉದ್ದೇಶಕ್ಕೆ 900 ಕೋಟಿ ವೆಚ್ಚದ ಹೆಬ್ಬಾಳ-ನಾಗವಾರ ಕೆರೆ ವ್ಯಾಲಿ ಯೋಜನೆಗೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಚಾಲನೆ ನೀಡಲಾಗಿತ್ತು. ಸ್ಥಳೀಯ ಶಾಸಕ ಎನ್.ಎಚ್.ಶಿವಶಂಕರರೆಡ್ಡಿ ಸರ್ಕಾರದ ಮೇಲೆ ಒತ್ತಡ ಹೇರಿ ಯೋಜನೆಗೆ ತಾಲೂಕನ್ನು ಸೇರಿಸುವಲ್ಲಿ ಯಶಸ್ವಿಯಾಗಿದ್ದರು. ಈಗ ನೀರು ಪ್ರಾಯೋಗಿಕವಾಗಿ ಹರಿದಿದೆ, ಆದರೆ ಬಹುನಿರೀಕ್ಷಿತ ಎತ್ತಿನಹೊಳೆ ಯೋಜನೆ ನೀರು ಯಾವಾಗ ಬರುತ್ತೆ ಎಂಬ ಪ್ರಶ್ನೆ ಸ್ಥಳೀಯರಲ್ಲಿ ಮೂಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net