

ಚಿಕ್ಕಮಗಳೂರು: ಕಾಶ್ಮೀರದಲ್ಲಿ ಪ್ರವಾಸಿಗರ ಮೇಲೆ ನಡೆದಿರುವ ಭಯೋತ್ಪಾದಕರ ದಾಳಿಯನ್ನು ಖಂಡಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕಾರ್ಯಕರ್ತರು ಗುರುವಾರ ನಗರದ ಆಜಾದ್ ಪಾರ್ಕ್ ವೃತ್ತದಲ್ಲಿ ಪ್ರತಿಭಟನೆ ನಡೆಸಿ ಬಳಿಕ ಎಡಿಸಿ ನಾರಾಯಣರಡ್ಡಿ ಕನಕರಡ್ಡಿ ಅವರ ಮೂಲಕ ರಾಜ್ಯಪಾಲರು ಹಾಗೂ ಪ್ರಧಾನ ಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಎಬಿವಿಪಿ ಜಿಲ್ಲಾ ಸಂಚಾಲಕ ರಾಕೇಶ್ ಮರಡಿ ಮಾತನಾಡಿ, ಜಮ್ಮು-ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ನಡೆದಿರುವ ಉಗ್ರರ ಹೇಡಿತನದ ಗುಂಡಿನ ದಾಳಿ ಕೃತ್ಯವನ್ನು ತೀವ್ರವಾಗಿ ಖಂಡಿಸಿದರು.
ಜಮ್ಮು ಮತ್ತು ಕಾಶ್ಮೀರ ಭಾರತದ ಅವಿಭಾಜ್ಯ ಅಂಗವೆAಬುದು ಸಾರ್ವಕಾಲಿಕ ಸತ್ಯವಾಗಿದೆ. ಅಲ್ಲಿನ ಪ್ರತ್ಯೇಕವಾದದ ಮನಸ್ಥಿತಿಯನ್ನು ಬದಲಾಯಿಸಲು ಜನಜೀವನ ಸ್ಥಿತಿಗತಿಗಳನ್ನು ಸ್ಥಿರಗೊಳಿಸಿ ಶಾಂತಿಯುತ ಕಾಶ್ಮೀರವೆಂಬುವುದನ್ನು ಖಚಿತಪಡಿಸಿಕೊಳ್ಳಲು ಕೇಂದ್ರಸರ್ಕಾರ ಈಗಾಗಲೇ ಹಲವು ಕ್ರಮಗಳನ್ನು ಕೈಗೊಂಡಿದೆ ಎಂದರು.
ಆದರೆ ಅಲ್ಲಿನ ಭಯೋತ್ಪಾದಕ ನುಸುಳುಕೋರರ ಹಾವಳಿ ತಡೆಗಟ್ಟಲು ಸಾಧ್ಯವಾಗಿಲ್ಲ. ಮಾರುಕಟ್ಟೆಗಳಲ್ಲಿ ಇತ್ತೀಚೆಗೆ ವಲಸೆ ಕಾರ್ಮಿಕರ ಮೇಲೆ ನಡೆದ ದಾಳಿಗಳು ಹಾಗೂ ಇಂದು ನಡೆದಿರುವ ಪ್ರವಾಸಿಗರ ಮೇಲಿನ ದಾಳಿಯನ್ನು ಗಮನಿಸಿದರೆ ಕಾಶ್ಮೀರದ ಶಾಂತಿ ಮತ್ತು ಭಾರತದೊಂದಿಗಿನ ಏಕತೆಗೆ ಉಗ್ರರು, ಪ್ರತ್ಯೇಕವಾದಿಗಳು ಸವಾಲೊಡ್ಡುತ್ತಿರುವಂತೆ ಕಾಣುತ್ತಿದೆ. ಇದು ಕಳವಳಕಾರಿ ಸಂಗತಿಯಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಕೇಂದ್ರಸರ್ಕಾರ ಈ ಉಗ್ರರ ವಿರುದ್ಧ ಕಠಿಣ ಕ್ರಮ ಕೈಗೊಂಡು ಆರೋಪಿಗಳಿಗೆ ತಕ್ಕ ಶಿಕ್ಷೆ ನೀಡಬೇಕು. ಭಯೋತ್ಪಾದಕ ದಾಳಿಯಲ್ಲಿ ಹತ್ಯೆಯಾದವರಿಗೆ ಹಾಗೂ ತೀವ್ರ ಗಾಯಗೊಂಡಿರುವವರಿಗೆ ಸಂತಾಪ ಸೂಚಿಸುವುದರ ಜೊತೆಗೆ ಸೂಕ್ತ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.
ಇಂತಹ ವಿಷಮ ಪರಿಸ್ಥಿತಿಯಲ್ಲಿ ಭಾರತೀಯ ನಾಗರೀಕರೆಲ್ಲರೂ ಒಗ್ಗಟ್ಟಾಗಿ ನಿಲ್ಲಬೇಕು. ಇಸ್ಲಾಮಿಕ್ ಭಯೋತ್ಪಾದನೆ ವಿರುದ್ಧ ಧ್ವನಿಎತ್ತಿ ಕೇಂದ್ರ ಮತ್ತು ರಾಜ್ಯಸರ್ಕಾರಗಳು ಉಗ್ರಗಾಮಿಗಳ ದಾಳಿಗೆ ಒಳಗಾಗಿರುವ ಕುಟುಂಬಗಳಿಗೆ ಸಾಂತ್ವನ ಹೇಳಿ ಧ್ಯೆರ್ಯ ತುಂಬಬೇಕು ಎಂದು ಆಗ್ರಹಿಸಿದರು.
ಭಾರತೀಯ ನೆಲದಲ್ಲಿ ನಾಗರಿಕರ ಮೇಲೆ ನಡೆದಿರುವ ಈ ರೀತಿಯ ದಾಳಿಯನ್ನು ಸಹಿಸಲು ಸಾಧ್ಯವಿಲ್ಲ. ಭಯೋತ್ಪಾದಕರ ವಿರುದ್ಧ ಶೂನ್ಯ ಸಹಿಷ್ಣತೆಯೊಂದಿಗೆ ಭಯೋತ್ಪಾö್ಪದನೆಯನ್ನು ಮೂಲದಿಂದ ಕಿತ್ತೊಗೆಯಬೇಕು ಎಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಎಬಿವಿಪಿ ಸಂಘಟನಾ ಕಾರ್ಯದರ್ಶಿ ಸಿದ್ಧಾರ್ಥ್ ಉಪ್ಪಾರ, ನಗರ ವಿದ್ಯಾರ್ಥಿ ಪ್ರಮುಖ್ ನಿರುಪಮಾ, ತಾಲೂಕು ಸಂಚಾಲಕ ಮನು, ಸಿದ್ದು, ಪ್ರೇಕ್ಷಿತ್ ಮತ್ತಿತರರಿದ್ದರು.