

ಹುಬ್ಬಳ್ಳಿ: ಬೆಳಗಾವಿ ಜಿಲ್ಲೆಯ ಕಣಕುಂಬಿಯಿಂದ ಸಂಗ್ರಹಿಸಿದ ಮಹದಾಯಿ ನದಿಯ ನೀರನ್ನು ಕಾಶಿ ವಿಶ್ವನಾಥನಿಗೆ ಅಭಿಷೇಕ ಮಾಡಲು ಹುಬ್ಬಳ್ಳಿಯಿಂದ ನೂರಾರು ಜನ ಮಹದಾಯಿ ಹೋರಾಟಗಾರರು ಸೋಮವಾರ ರಾತ್ರಿ ಕಾಶಿಗೆ ಪ್ರಯಾಣ ಬೆಳೆಸಿದರು.
ಹುಬ್ಬಳ್ಳಿ-ಬನಾರಸ್ ಎಕ್ಸ್ಪ್ರೆಸ್ ವಿಶೇಷ ರೈಲಿನಲ್ಲಿ ಪ್ರಯಾಣ ಬೆಳೆಸಿದ ಹೋರಾಟಗಾರರು ಬುಧವಾರ ಬೆಳಗ್ಗೆ ಕಾಶಿಗೆ ತಲುಪಲಿದ್ದಾರೆ. ಹೋರಾಟಗಾರರು ಸಂಪೂರ್ಣ ರೈಲನ್ನು ಮುಂಗಡವಾಗಿಯೇ ಬುಕ್ ಮಾಡಿದ್ದರು. ರೈತ ಸೇನಾ ಕರ್ನಾಟಕದಿಂದ ಕಾಶಿ ಯಾತ್ರೆ ಸಂಘಟಿಸಲಾಗಿದೆ.
ಸೋಮವಾರ ಸಂಜೆ ಹುಬ್ಬಳ್ಳಿ ಮೂರುಸಾವಿರ ಮಠದ ಆವರಣದಲ್ಲಿ ಸೇರಿದ ಧಾರವಾಡ, ಬಾಗಲಕೋಟ, ಗದಗ ಹಾಗೂ ಹಾವೇರಿ ಜಿಲ್ಲೆಯಿಂದ ಆಗಮಿಸಿದ ಹೋರಾಟಗಾರರು ಚನ್ನಮ್ಮ ವೃತ್ತ, ಲ್ಯಾಮಿಂಗ್ಟನ್ ರಸ್ತೆ ಮಾರ್ಗವಾಗಿ ಸಾಗಿ ರಾತ್ರಿ 8 ಗಂಟೆಗೆ ರೈಲ್ವೆ ನಿಲ್ದಾಣ ತಲುಪಿದರು.
ವಿಶ್ವಾಸವಿಲ್ಲ: ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಎಲ್ಲ ಪಕ್ಷಗಳ ಮೇಲೆ ನಮಗೆ ವಿಶ್ವಾಸ ಹೊರಟು ಹೋಗಿದೆ. ನ್ಯಾಯಾಧೀಕರಣ ತೀರ್ಪು ನೀಡಿ ಹಲವು ವರ್ಷಗಳಾದರೂ ರಾಜಕೀಯ ಪಕ್ಷಗಳಿಂದ ನೀರು ತರಲು ಸಾಧ್ಯವಾಗಿಲ್ಲ. ಈಗ ಉಳಿದಿರುವುದು ಒಂದೇ ಮಾರ್ಗ. ಮಹದಾಯಿ ನೀರನ್ನು ಕಾಶಿ ವಿಶ್ವನಾಥನಿಗೆ ಅಭಿಷೇಕ ಮಾಡಿ ನಮ್ಮ ಬೇಡಿಕೆ ಈಡೇರಿಸು ಎಂದು ಬೇಡಿಕೊಳ್ಳುತ್ತೇವೆ ಎಂದು ರೈತ ಸೇನಾದ ಅಧ್ಯಕ್ಷ ವಿರೇಶ ಸೊಬರದಮಠ ತಿಳಿಸಿದ್ದಾರೆ.
ಡಾ.ಮಹೇಶ ನಾಲವಾಡ, ಶಿವಾನಂದ ಸತ್ತಿಗೇರಿ, ವಜ್ರಮನಿ ಶಿರಕೋಳ, ಇತರರು ಯಾತ್ರೆಯಲ್ಲಿ ಪಾಲ್ಗೊಂಡಿದ್ದಾರೆ.