

ಬಾಗಲಕೋಟೆ: ಹಳಿದವರು ನನ್ನ ಬಂಧುಗಳು, ನಿಂದಿಸಿದವರು ನನ್ನ ತಂದೆ-ತಾಯಿಗಳು ಎನ್ನುವ ಮನುಷ್ಯ ನಾನು. ನನ್ನದು ಬೆದರಿಸುವ ಸಂಸ್ಕೃತಿ ಅಲ್ಲ, ಶರಣ ಸಂಸ್ಕೃತಿ.
ಡಿಸಿಸಿ ಬ್ಯಾಂಕ್ ಚುನಾವಣೆ ಹಿನ್ನೆಲೆಯಲ್ಲಿ ಹುನಗುಂದ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ತಮ್ಮ ವಿರುದ್ಧ ಮಾಡಿರುವ ಜೀವಬೆದರಿಕೆ ಹೇಳಿಕೆಗೆ ಡಿಸಿಎಂ ಗೋವಿಂದ ಕಾರಜೋಳ ಭಾನುವಾರ ನೀಡಿದ ಪ್ರತಿಕ್ರಿಯೆ ಇದು.
ನನ್ನಿಂದ ಜೀವಭಯ ಇದೆ ಎಂದರೆ ಸತ್ಯ ಅನ್ನಿಸುತ್ತಾ? ನನ್ನ ಸಂಸ್ಕೃತಿ ಅದಲ್ಲ. ನನಗೂ ಅವರಿಗೂ(ಕಾಶಪ್ಪನವರ) ಏನು ಸಂಬಂಧ? ಅವರು ನನ್ನ ಕ್ಷೇತ್ರದವರಾ? ನನ್ನ ಎದುರಾಳಿನಾ? ಅವರಿಗೂ ತಮಗೂ ಯಾವುದೇ ಸಂಬಂಧ ಇಲ್ಲ ಎಂದ ಅವರು, ನನ್ನ ಕ್ಷೇತ್ರದಲ್ಲೇ ನಾನು ಪೊಲೀಸರನ್ನು ದುರುಪಯೋಗ ಮಾಡಿಕೊಂಡಿಲ್ಲ. ಇನ್ನು ಅವರ ಕ್ಷೇತ್ರದಲ್ಲಿ ಮಾಡುತ್ತೇನಾ? ಅವರ ಎದುರಾಳಿಗೆ ನಾನು ಬೆಂಬಲವಾಗಿ ಅವರಿಗೆ ತೊಂದರೆ ಕೊಡುತ್ತಿದ್ದೇನೆ ಎನ್ನುವುದು ಭ್ರಮೆ. ಅವರ ಈ ಭ್ರಮೆಗೆ ನಾನೇನು ಮಾಡಲು ಆಗುತ್ತದೆ ಎಂದು ಮಾಜಿ ಶಾಸಕರಿಗೆ ಟಾಂಗ್ ನೀಡಿದರು.
ಡಿಸಿಸಿ ಬ್ಯಾಂಕ್ ಚುನಾವಣೆಗೆ ಸಂಬಂಧಿಸಿದಂತೆ ಡಿಸಿಎಂ ಕಾರಜೋಳ ತಮ್ಮ ವಿರುದ್ಧ ಪೊಲೀಸ್ ದುರ್ಬಳಿಕೆ ಮಾಡುತ್ತಿದ್ದಾರೆ. ತಮಗೆ ಜೀವಭಯ ಇದ್ದು, ತಮಗೇನಾದರೂ ಆದಲ್ಲಿ ಅದಕ್ಕೆ ಡಿಸಿಎಂ ಗೋವಿಂದ ಕಾರಜೋಳ ಮತ್ತು ಹುನಗುಂದ ಶಾಸಕ ದೊಡ್ಡನಗೌಡ ಪಾಟೀಲ ಕಾರಣ ಎಂದು ಇತ್ತೀಚೆಗೆ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ಆರೋಪಿಸಿದ್ದರು.
ಆರ್ ಆ್ಯಂಡ್ ಆರ್ ಖಾಲಿ ಹುದ್ದೆ ಭರ್ತಿಗೆ ಕ್ರಮ
ಕೃಷ್ಣಾ ಮೇಲ್ದಂಡೆ ಯೋಜನೆ ಅಡಿಯ ಆಯುಕ್ತರ ಕಚೇರಿ ಅಧೀನದಲ್ಲಿ ಬರುವ ಪುನರ್ವಸತಿ ಮತ್ತು ಪುನರ್ ನಿರ್ಮಾಣ ಕಚೇರಿಗಳಿಗೆ ಪೂರ್ಣಾವಧಿ ಆಯುಕ್ತರನ್ನು ಶೀಘ್ರದಲ್ಲೇ ನೇಮಕ ಮಾಡುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ, ಡಿಸಿಎಂ ಗೋವಿಂದ ಕಾರಜೋಳ ಅಭಯ ನೀಡಿದರು.
ಭಾನುವಾರ ಜಿಲ್ಲಾ ಕ್ರೀಡಾಂಗಣದಲ್ಲಿ ಕನ್ನಡ ರಾಜ್ಯೋತ್ಸವ ಧ್ವಜಾರೋಹಣ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆರ್ ಆ್ಯಂಡ್ ಆರ್‌ನಲ್ಲಿ ನಮಗೆ ಪ್ರಮುಖವಾಗಿ ಭೂಸ್ವಾಧೀನ ಅಧಿಕಾರಿಗಳು ಬೇಕಿದೆ. ಸದ್ಯ ಗ್ರೇಡ್-1 ತಹಸೀಲ್ದಾರ್‌ಗಳಿಗೆ ಬಡ್ತಿ ಕೊಡುವುದು ಸಿದ್ಧವಾಗುತ್ತದೆ. ಅದು ಆದ ತಕ್ಷಣವೇ ಖಾಲಿ ಇರುವ ಭೂಸ್ವಾಧೀನಾಧಿಕಾರಿ ಗಳನ್ನು ನೇಮಕ ಮಾಡಲಾಗುವುದು. ಬಳಿಕ ಪೂರ್ಣಾವಧಿಗೆ ಆಯುಕ್ತ ಹುದ್ದೆಯನ್ನು ಭರ್ತಿ ಮಾಡುತ್ತೇವೆ. ಇಂಜಿನಿಯರ್ ಹುದ್ದೆಗಳನ್ನು ಭರ್ತಿ ಮಾಡಲಾಗುವುದು. ಆದಷ್ಟು ಬೇಗ ಈ ಕೆಲಸ ಆಗುತ್ತದೆ ಎಂದರು.