

ಬೀದರ್: ಉದ್ಯಮಿ ದಿ. ಕಾಶಪ್ಪ ಧನ್ನೂರ ಅವರು ಮಾದರಿ ಬದುಕು ನಡೆಸಿದ್ದರು ಎಂದು ಜಿಲ್ಲೆಯ ಮಠಾಧೀಶರು, ಜನಪ್ರತಿನಿಧಿಗಳು ಹಾಗೂ ಗಣ್ಯರು ಅಭಿಪ್ರಾಯಪಟ್ಟರು.
ಇಲ್ಲಿಯ ಬೆಲ್ದಾಳೆ ಕನ್ವೆನ್ಶನ್ ಹಾಲ್‍ನಲ್ಲಿ ಶರಣ ಬಳಗದ ವತಿಯಿಂದ ದಿ. ಕಾಶಪ್ಪ ಧನ್ನೂರ ಅವರಿಗೆ ಆಯೋಜಿಸಿದ್ದ ಶರಣು ಸಮರ್ಪಣೆ (ಶ್ರದ್ಧಾಂಜಲಿ) ಕಾರ್ಯಕ್ರಮದಲ್ಲಿ ಮಾತನಾಡಿದ ಅನೇಕರು, ಧನ್ನೂರ ಅವರು ಬಸವಾದಿ ಶರಣರ ಕಾಯಕ ಹಾಗೂ ದಾಸೋಹ ತತ್ವವನ್ನು ಜೀವನದುದ್ದಕ್ಕೂ ಪಾಲಿಸಿಕೊಂಡು ಬಂದಿದ್ದರು ಎಂದು ಸ್ಮರಿಸಿದರು.
ಮೂಲತಃ ಭಾಲ್ಕಿ ತಾಲ್ಲೂಕಿನ ಧನ್ನೂರ ಗ್ರಾಮದವರಾದ ಅವರು ಕಿರಿಯ ವಯಸ್ಸಿನಲ್ಲೇ ಬೀದರ್‍ಗೆ ಬಂದರು. ಗಾಂಧಿಗಂಜ್‍ನಲ್ಲಿ ವೃತ್ತಿ ಜೀವನ ಆರಂಭಿಸಿದರು. ಕಾಯಕ ನಿಷ್ಠೆ, ಶಿಸ್ತು, ಸಮಯಪ್ರಜ್ಞೆ, ಪ್ರಾಮಾಣಿಕತೆ ಮೂಲಕ ತಮ್ಮ ಉದ್ಯಮವನ್ನು ಎತ್ತರಕ್ಕೆ ಬೆಳೆಸಿದರು. ಜಿಲ್ಲೆಯ ಯಶಸ್ವಿ ಉದ್ಯಮಿಗಳಲ್ಲಿ ಒಬ್ಬರಾದರು. ಕೃಷಿಯಲ್ಲೂ ತೊಡಗಿಸಿಕೊಂಡರು ಎಂದು ಹೇಳಿದರು.
ತಾನು ಬೆಳೆಯುವ ಜತೆಗೆ ಇತರರನ್ನೂ ಬೆಳೆಸುವ ಉದಾರತೆ ತೋರಿದರು. ಸಮಾಜೋಧಾರ್ಮಿಕ ಕಾರ್ಯಗಳಿಗೆ ತನು, ಮನ, ಧನದಿಂದ ಸಹಕಾರ ನೀಡಿದರು. ಅನೇಕ ಸಂಘ ಸಂಸ್ಥೆಗಳ ಬೆಳವಣಿಗೆಗೆ ಬೆನ್ನೆಲುಬಾಗಿ ನಿಂತರು ಎಂದರು.
ಎನ್‍ಎಸ್‍ಎಸ್‍ಕೆ ಉಪಾಧ್ಯಕ್ಷ, ಗುರುಪಾದಪ್ಪ ನಾಗಮಾರಪಳ್ಳಿ ಸಹಕಾರ ಆಸ್ಪತ್ರೆಯ ನಿರ್ದೇಶಕ, ಗಾಂಧಿಗಂಜ್‍ನ ದಿ ಗ್ರೇನ್ ಆ್ಯಂಡ್ ಸೀಡ್ಸ್ ಮರ್ಚಂಟ್ಸ್ ಅಸೋಸಿಯೇಶನ್ ಅಧ್ಯಕ್ಷ, ಬಸವೇಶ್ವರ ದೇವಸ್ಥಾನ ಕಮಿಟಿ ಅಧ್ಯಕ್ಷ, ಲಿಂಗಾಯತ ಸಮಾಜ ಅಭಿವೃದ್ಧಿ ಸಂಘದ ಉಪಾಧ್ಯಕ್ಷ ಸೇರಿದಂತೆ ಹತ್ತು ಹಲವು ಸಂಘ ಸಂಸ್ಥೆಗಳ ಪದಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದರು. ತಮ್ಮ ಮಕ್ಕಳಿಗೂ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಲು ಪ್ರೋತ್ಸಾಹಿಸಿದರು ಎಂದು ಹೇಳಿದರು.
ಮಠಾಧೀಶರು, ಜನಪ್ರತಿನಿಧಿಗಳು ಹಾಗೂ ಗಣ್ಯರು ಕಾಶಪ್ಪ ಧನ್ನೂರ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ಬಸವ ಮಂಟಪದ ಮಾತೆ ಸತ್ಯದೇವಿ ಪ್ರಾರ್ಥನೆ ನಡೆಸಿಕೊಟ್ಟರು. ಈ ವೇಳೆ ಬಸವ ಕಾಯಕ ದಾಸೋಹ(ಬಿಕೆಡಿ) ಫೌಂಡೇಶನ್ ವತಿಯಿಂದ ಪ್ರಕಟಿಸಲಾದ ಕಾಶಪ್ಪ ಧನ್ನೂರ ಅವರು ಸಂಪಾದಿಸಿದ ‘ಪ್ರಭುದೇವರ ಪ್ರಸಾದ’ ಹಾಗೂ ಡಾ. ಬಸವಲಿಂಗ ಪಟ್ಟದ್ದೇವರು ಸಂಪಾದಿಸಿದ ‘ವಚನ ಪ್ರಸಾದ’ ಪುಸ್ತಕಗಳನ್ನು ಬಿಡುಗಡೆ ಮಾಡಲಾಯಿತು.
ಬಸವಕಲ್ಯಾಣದ ಅನುಭವ ಮಂಟಪದ ಅಧ್ಯಕ್ಷ ಶ್ರೀ ಡಾ. ಬಸವಲಿಂಗ ಪಟ್ಟದ್ದೇವರು, ಹುಲಸೂರಿನ ಶ್ರೀ ಶಿವಾನಂದ ಸ್ವಾಮೀಜಿ, ಶ್ರೀ ಗುರುಬಸವ ಪಟ್ಟದ್ದೇವರು, ಬೆಲ್ದಾಳ ಸಿದ್ಧರಾಮ ಶರಣರು, ಬಸವಕಲ್ಯಾಣದ ಬಸವ ಮಹಾಮನೆಯ ಬಸವಪ್ರಭು ಸ್ವಾಮೀಜಿ, ಬಸವ ಸೇವಾ ಪ್ರತಿಷ್ಠಾನದ ಡಾ. ಗಂಗಾಂಬಿಕೆ ಅಕ್ಕ, ಬಸವಕಲ್ಯಾಣದ ಶ್ರೀ ಶಿವಾನಂದ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಡಿಸಿಸಿ ಬ್ಯಾಂಕ್ ಅಧ್ಯಕ್ಷ ಉಮಾಕಾಂತ ನಾಗಮಾರಪಳ್ಳಿ ಅಧ್ಯಕ್ಷತೆ ವಹಿಸಿದ್ದರು. ಹುಮನಾಬಾದ್ ಶಾಸಕ ರಾಜಶೇಖರ ಪಾಟೀಲ್, ಬೀದರ್ ದಕ್ಷಿಣ ಶಾಸಕ ಬಂಡೆಪ್ಪ ಖಾಶೆಂಪುರ, ಬೀದರ್ ಶಾಸಕ ರಹೀಂಖಾನ್, ಗುರುಪಾದಪ್ಪ ನಾಗಮಾರಪಳ್ಳಿ ಸಹಕಾರ ಆಸ್ಪತ್ರೆಯ ಅಧ್ಯಕ್ಷ ಸೂರ್ಯಕಾಂತ ನಾಗಮಾರಪಳ್ಳಿ, ಕೆಆರ್‍ಇ ಸಂಸ್ಥೆ ಅಧ್ಯಕ್ಷ ಡಾ. ಬಸವರಾಜ ಪಾಟೀಲ ಅಷ್ಟೂರ, ಭಾರತೀಯ ಬಸವ ಬಳಗದ ಜಿಲ್ಲಾ ಘಟಕದ ಅಧ್ಯಕ್ಷ ಬಾಬುವಾಲಿ, ಜಿಲ್ಲಾ ಪಂಚಾಯಿತಿ ಸದಸ್ಯೆ ಶಕುಂತಲಾ ಬೆಲ್ದಾಳೆ, ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ರಾಜೇಂದ್ರ ಗಂದಗೆ, ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ ಚನಶೆಟ್ಟಿ, ಜಿಲ್ಲಾ ಅಭಿವೃದ್ಧಿ ವೇದಿಕೆಯ ಅಧ್ಯಕ್ಷ ಚನ್ನಬಸಪ್ಪ ಹಾಲಹಳ್ಳಿ, ಪ್ರೊ. ಎಸ್.ಬಿ. ಬಿರಾದಾರ, ಕಾಶಪ್ಪ ಧನ್ನೂರ ಅವರ ಪತ್ನಿ ಸುಶೀಲಾಬಾಯಿ, ಪುತ್ರರಾದ ರಾಷ್ಟ್ರೀಯ ಬಸವದಳದ ರಾಷ್ಟ್ರೀಯ ಅಧ್ಯಕ್ಷ ಬಸವರಾಜ ಧನ್ನೂರ, ವಿವೇಕಾನಂದ ಧನ್ನೂರ, ಪುತ್ರಿ ಡಾ. ಜ್ಯೋತಿ ಪ್ರಕಾಶ ಮೊಕಾಶಿ, ಡಾ. ಜಗನ್ನಾಥ ಹೆಬ್ಬಾಳೆ ಇದ್ದರು.
ಕಲಾವಿದ ಶಿವಕುಮಾರ ಪಾಂಚಾಳ, ಅಶ್ವಿನಿ ಹಾಗೂ ತಂಡದವರು ವಚನ ಗಾಯನ ನಡೆಸಿಕೊಟ್ಟರು. ಸುರೇಶ ಸ್ವಾಮಿ ಹಾಗೂ ನವಲಿಂಗ ಪಾಟೀಲ ನಿರೂಪಣೆ ಮಾಡಿದರು. ಬೀದರ್ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷ ಬಿ.ಜಿ. ಶೆಟಕಾರ ಸ್ವಾಗತಿಸಿದರು. ರಾಜೇಂದ್ರ ಜೊನ್ನಿಕೇರಿ ವಂದಿಸಿದರು.
ವಿವಿಧ ಕ್ಷೇತ್ರಗಳ ಗಣ್ಯರು ಪಾಲ್ಗೊಂಡಿದ್ದರು.