

ಮೈಸೂರು: ಕಾವ್ಯದಿಂದ ಮಾತ್ರ ಭಾವನೆ, ಆಲೋಚನೆ ವ್ಯಕ್ತಪಡಿಸಲು ಸಾಧ್ಯ. ಹಲವು ಲೇಖಕರು ಕಾವ್ಯಗಳ ಮೂಲಕವೇ ಬರವಣಿಗೆಯ ಲೋಕ ಪ್ರವೇಶಿಸಿದ್ದಾರೆ ಎಂದು ಸಾಹಿತಿ ಪ್ರೊ.ಸಿ.ನಾಗಣ್ಣ ಹೇಳಿದರು.
ನಗರದ ಇಂಜಿನಿಯರ್‌ಗಳ ಸಂಸ್ಥೆಯ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ಡಾ.ಕೆ.ಎನ್.ಗಿರೀಶ್ ಅವರ ‘ರಾಗೌ ಕಾವ್ಯ: ವಿಭಿನ್ನ ನೆಲೆಗಳು ಸಂಶೋಧನಾ ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕಾವ್ಯಕ್ಕೆ ಮನಸೋಲದವರು ಯಾರೂ ಇಲ್ಲ. ರಾಗೌ ಅಪ್ಪಟ ಕವಿಯಾಗಿದ್ದು, ಅವರ ಬದುಕು ಹಾಗೂ ಭಾವವನ್ನು ಕೃತಿಯಲ್ಲಿ ಸರಳವಾಗಿ ಮೂಡಿಸಿದ್ದಾರೆ.
ರಾಗೌ ಅವರು ಯಾವ ಪಂತಕ್ಕೂ ಸೇರಿದವರಲ್ಲ, ಸತ್ಯ, ಸೌಂದರ್ಯವನ್ನು ಸ್ವಾಗತಿಸುವ ವ್ಯಕ್ತಿತ್ವ ಅವರದ್ದಾಗಿದೆ. ಇದನ್ನು ತಮ್ಮ ಬರಹದಲ್ಲಿ ಬರೆದು, ಅದರಂತೆಯೇ ನಡೆಯುತ್ತಿದ್ದಾರೆ. ವಿಮರ್ಶಕರ ತೀಕ್ಷಣತೆಗೆ ಒಳಪಡದೆ, ಯಾವ ಪಂಥಕ್ಕೂ ಸೇರಿಸಲಾಗದೆ ತಟಸ್ಥವಾಗಿ ಸಾಹಿತ್ಯ ನಿಷ್ಠರಾಗಿ ಸೇವೆ ಸಲ್ಲಿಸುತ್ತಿರುವ ಶ್ರೇಷ್ಠ ಸಾಹಿತಿ ಎನಿಸಿದ್ದಾರೆ ಎಂದು ತಿಳಿಸಿದರು.
ಹೊಸ ತಲೆಮಾರಿನ ಲೇಖಕರು ಅಚ್ಚುಕಟ್ಟಾದ ಗ್ರಂಥ ರಚನೆ ಗಮನ ಹರಿಸಬೇಕು. ಹಿರಿಯ ಸಾಹಿತಿ ಪ್ರೊ.ರಾಗೌ(ರಾಮೇಗೌಡ) ಅವರ ಬಗ್ಗೆ ಪಿಎಚ್.ಡಿಗಾಗಿ ಮಾಡಿದ ಸಂಶೋಧನಾ ವರದಿಯನ್ನು ಯುವ ಲೇಖಕ ಡಾ.ಕೆ.ಎನ್.ಗಿರೀಶ್ ‘ರಾಗೌ ಕಾವ್ಯ: ವಿಭಿನ್ನ ನೆಲೆಗಳು’ ಶೀರ್ಷಿಕೆಯಲ್ಲಿ ಅಚ್ಚುಕಟ್ಟಾಗಿ ಕೃತಿ ರೂಪದಲ್ಲಿ ಹೊರ ತಂದಿದ್ದಾರೆ. ಈ ಕೃತಿ ಸೊಗಸಾಗಿ ಮೂಡಿಬಂದಿದ್ದು, ಹೊಸ ತಲೆ ಮಾರಿನ ಬರಹಗಾರರು ಪುಸ್ತಕ ರಚನೆಯಲ್ಲಿ ಗಮನವಿಟ್ಟು, ಹೆಚ್ಚಿನ ಆದ್ಯತೆ ವಹಿಸಬೇಕು ಎಂದರು.
ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ರಾಗೌ ಅವರು ಐದು ದಶಕಗಳ ಸುದೀರ್ಘ ಅವಧಿಯ ಸೇವೆ ಸಲ್ಲಿಸಿ, ಅಪಾರ ಕೊಡುಗೆ ನೀಡಿದ್ದಾರೆ. ಉತ್ತಮ ಜಾನಪದ ತಜ್ಞರೂ ಆಗಿರುವ ಸಾಹಿತಿ ಪ್ರೊ.ರಾಗೌ ನೆನಪಿನಲ್ಲಿಟ್ಟುಕೊಳ್ಳುವಂತಹ ಅನೇಕ ಕವನ ಸಂಕಲನ ರಚಿಸಿ, ಸಾಹಿತ್ಯಾಸಕ್ತರ ಮನ ಗೆದ್ದಿದ್ದಾರೆ.
ತಮ್ಮ ಕೃತಿಗಳಲ್ಲಿ ಕವಿ ಮತ್ತು ಕಾವ್ಯದ ತಾತ್ವಿಕತೆ, ಜೀವನ್ಮುಖಿ ದೃಷ್ಟಿಕೋನ, ಭಾವನಾತ್ಮಕತೆಯ ಜತೆಗೆ ವೈಚಾರಿಕ ಮಿಡಿತ ಹಾಗೂ ಆತ್ಮಸೈರ್ಯದ ಜತೆಗೆ ವರ್ತಮಾನ ಕಾಲದ ಮುಖಾಮುಖಿ ನೆಲೆಗಟ್ಟಿನೊಳಗೆ ವಸಾಹತು ಶಾಹಿ, ಬಂಡವಾಳಶಾಹಿ ಕುರಿತು ಚರ್ಚಿಸಿದ್ದಾರೆ ಎಂದು ತಿಳಿಸಿದರು.
ಉತ್ತಮ ಜಾನಪದ ತಜ್ಞರೂ ಆಗಿರುವ ರಾಗೌ ಅವರು ಭಾಷಾಕೋಶಕ್ಕೆ ಹೊಸ ಆಯಾಮ ನೀಡಿದ್ದಾರೆ. ಅವರ ಬದುಕಿನ ಆರಂಭದ ಘಟ್ಟದಲ್ಲಿ ಗ್ರಾಮ ಜೀವನ ದಟ್ಟ ಅನುಭವ ಸ್ಥಾಯಿಯಾಗಿ ಹೃದಯದಲ್ಲಿ ಉಳಿದಿದೆ. ಅವರ ಕವಿತಾ ಸಂಕಲನ ನೆನಪು ಮಾಡಿಕೊಳ್ಳಬೇಕು. 1966ರಲ್ಲಿ ಕಾವ್ಯ ಯಾತ್ರೆ ಆರಂಭಿಸಿದ ಅವರು ಇತ್ತೀಚೆಗಷ್ಟೆ ಹೊಸ ಕಾವ್ಯ ರಚಿಸಿದ್ದಾರೆ ಎಂದರು.
ವಿಶ್ರಾಂತ ಕುಲಪತಿ ಪ್ರೊ.ಪದ್ಮಾಶೇಖರ್, ಶಾರದಾ ವಿಲಾಸ ಕಾಲೇಜು ಪ್ರಾಂಶುಪಾಲೆ ಡಾ.ಎಂ.ದೇವಿಕಾ, ಸಾಹಿತಿ ರಾಗೌ, ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಸಹ ಪ್ರಾಧ್ಯಾಪಕ ಡಾ.ಎನ್.ಆರ್.ಚಂದ್ರೇಗೌಡ, ಲೇಖಕ ಡಾ.ಕೆ.ಎನ್.ಗಿರೀಶ, ಪ್ರಕಾಶಕ ಎಚ್.ಆರ್.ಮಂಜೇಗೌಡ ಇನ್ನಿತರರಿದ್ದರು