

ರಾಮನಗರ: ಕಾವೇರಿ ವಿಚಾರದಲ್ಲಿ ಮೊದಲು ತಮಿಳುನಾಡಿನೊಂದಿಗೆ ಹೋರಾಟ ಮಾಡುತ್ತಿದ್ದೆವು. ಆದರೆ ಈಗ ರಾಜ್ಯದ ಎರಡು ಪಕ್ಷಗಳ ಜತೆಗೆ ಹೋರಾಟ ಮಾಡಬೇಕಾದ ಅನಿವಾರ್ಯತೆ ನಿರ್ಮಾಣವಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದರು.
ನಗರದ ಕಾಂಗ್ರೆಸ್ ಕಚೇರಿಯಲ್ಲಿ ಗುರುವಾರ ನಡೆದ ಶಾಸಕರ ಸಭೆ ಬಳಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನ್ಯಾಯಾಲಯಕ್ಕೆ ಗೌರವ ನೀಡುವುದು, ನಮ್ಮ ದೇವರಾದ ಜನರೆದುರು ತಪ್ಪಿತಸ್ಥರಾಗಬಾರದು ಎಂಬ ಉದ್ದೇಶ ನಮ್ಮದು. ಸರ್ಕಾರ ಪಾದಯಾತ್ರೆ ತಡೆಯುವ ನಿಟ್ಟಿನಲ್ಲಿ ಸಾಕಷ್ಟು ಸರ್ಕಸ್ ಮಾಡಿದೆ. ಕೊನೆಗೆ ನಾವು ಇಬ್ಬರೇ ನಡೆಯಬೇಕು ಎಂದುಕೊಂಡಿದ್ದೆವು. ಆದರೆ, ಜನರು ಸುತ್ತ ಸುತ್ತಿಕೊಳ್ಳುತ್ತಾರೆ ಎಂಬ ಭಯ ಅಷ್ಟೆ. ನಾವು ಕೋರ್ಟ್, ಜೈಲು, ಬೇಲು ಇಂತಹವಕ್ಕೆಲ್ಲ ಹೆದರಿಕೊಳ್ಳುವುದಿಲ್ಲ ಎಂದರು.
ಕೋವಿಡ್ ಸಮಯದಲ್ಲಿ ಜನರೊಟ್ಟಿಗೆ ನಿಂತಿದ್ದೇವೆ. ಸಾವಿರಕ್ಕೂ ಹೆಚ್ಚು ಆಂಬುಲೆನ್ಸ್‌ಗಳನ್ನು ಸಾರ್ವಜನಿಕರ ಸೇವೆಗೆ ಮೀಸಲಿಟ್ಟಿದ್ದೆವು. ಈ ಸೇವೆ ಹೀಗೆ ಮುಂದುವರಿಯಲಿದೆ. ನಮ್ಮ ಹೋರಾಟ ತಾತ್ಕಾಲಿಕ ಸ್ಥಗಿತ ಅಷ್ಟೆ. ಸಾವಿರಾರು ಜನ ಪ್ರೀತಿ ತೋರಿಸಿದ್ದಾರೆ. ಅವರ ಋಣ ಹೇಗೆ ತೀರಿಸಬೇಕು ಎಂದು ಗೊತ್ತಾಗುತ್ತಿಲ್ಲ ಎಂದರು.
ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮಾತನಾಡಿ, ನಮಗೆ ಕೇಸ್ ಹಾಕುತ್ತಾರೆ, ಆದೇಶಗಳ ಭಯದಿಂದ ಪಾದಯಾತ್ರೆಯನ್ನು ಮುಂದೂಡಿಕೆ ಮಾಡಿಲ್ಲ. ಜನರ ಆರೋಗ್ಯ ದೃಷ್ಟಿಯಿಂದ ಮುಂದೂಡಲಾಗಿದೆ. ಬೆಂಗಳೂರಿನಲ್ಲಿ ಸೋಂಕು ಹೆಚ್ಚಾಗುತ್ತಿದೆ. ಇನ್ನೆರೆಡು ದಿನದಲ್ಲಿ ನಾವು ಬೆಂಗಳೂರು ತಲುಪುತ್ತಿದ್ದೆವು. ಅಲ್ಲಿ ಲಕ್ಷಾಂತರ ಜನ ಸೇರುತ್ತಿದ್ದರು. ಜನರಿಗೆ ನಮ್ಮ ಮೇಲೆ ಯಾವುದೆ ಕೆಟ್ಟ ಅಭಿಪ್ರಾಯ ಮೂಡಬಾರದು ಎಂಬ ಉದ್ದೇಶದಿಂದ ತಾತ್ಕಾಲಿಕವಾಗಿ ಇಲ್ಲಿಗೆ ಸ್ಥಗಿತಗೊಳಿಸುತ್ತಿದ್ದೇವೆ. ಸೋಂಕು ಕಡಿಮೆಯಾದ ಬಳಿಕ ರಾಮನಗರದಿಂದಲೇ ಪಾದಯಾತ್ರೆ ಮುಂದುವರಿಸಲಾಗುವುದು ಎಂದರು.
ಸೋಂಕು ಹರಡಲು ಬಿಜೆಪಿಯೇ ಕಾರಣ: ಪಾದಯಾತ್ರೆಯಲ್ಲಿ ಭಾಗವಹಿಸಲು ಉತ್ಸಾಹದಿಂದ ಬಂದಿದ್ದ ಕಾರ್ಯಕರ್ತರಲ್ಲಿ ಮನವಿ ಮಾಡುತ್ತಿದ್ದು, ಯಾರು ಉತ್ಸಾಹ ಕಳೆದುಕೊಳ್ಳಬೇಡಿ. ಮುಂದೇ ಇಲ್ಲಿಂದಲೇ ಪಾದಯಾತ್ರೆ ಆರಂಭಿಸಿ ಬೆಂಗಳೂರಿನ ನ್ಯಾಷನಲ್ ಕಾಲೇಜು ಮೈದಾನದಲ್ಲೇ ಅಂತ್ಯಗೊಳಿಸುತ್ತೇವೆ. ಕಾಂಗ್ರೆಸ್ ಜನರ ಬಗ್ಗೆ ಆಲೋಚಿಸುತ್ತದೆ. ಜನರ ಹಿತವೇ ಮುಖ್ಯ. ನಾವು ಪಾದಯಾತ್ರೆಯ ನಿರ್ಣಯ ಕೈಗೊಂಡ ವೇಳೆ ಕೋವಿಡ್ ಮೂರನೇ ಅಲೆ ಪ್ರಾರಂಭಗೊಂಡಿರಲಿಲ್ಲ. ಮೂರನೇ ಅಲೆ ವೇಗವಾಗಿ ಹರಡುತ್ತಿದೆ. ಬುಧವಾರ ಒಂದೇ ದಿನ ಸುಮಾರು 15 ಸಾವಿರಕ್ಕೂ ಹೆಚ್ಚು ಜನರಿಗೆ ಸೋಂಕು ಹರಡಿದೆ. ರಾಷ್ಟ್ರೀಯ ಪಕ್ಷವಾಗಿ ನಮ್ಮದೇ ಆದ ಜವಾಬ್ದಾರಿ ಇದೆ. ಇದನ್ನು ನಿರ್ವಹಿಸುವುದು ನಮ್ಮ ಕರ್ತವ್ಯ. ಸೋಂಕು ವೇಗವಾಗಿ ಹರಡಲು ಕಾಂಗ್ರೆಸ್ ಕಾರಣವಲ್ಲ. ಬಿಜೆಪಿಯವರೇ ಕಾರಣ ಎಂದು ಸಿದ್ದರಾಮಯ್ಯ ಕಿಡಿಕಾರಿದರು.
ಪಾದಯಾತ್ರೆ ಬಗ್ಗೆ ಸದಭಿಪ್ರಾಯ: ಬಿಜೆಪಿ ಸರ್ಕಾರ ಸೋಂಕು ತಡೆಗಟ್ಟಲು ನಿಷ್ಪಕ್ಷಪಾತ ಕ್ರಮ ಕೈಗೊಂಡಿಲ್ಲ. ನಮ್ಮ ಪಾದಯಾತ್ರೆಯನ್ನು ಮೊಟಕುಗೊಳಿಸುವ ಉದ್ದೇಶದಿಂದ ದಿನಕ್ಕೊಂದು ಆದೇಶ ಹೊರಡಿಸುತ್ತಿದೆ. ನನಗೆ ಒಂದು, ಡಿಕೆಶಿಗೆ ಒಂದು ನೋಟಿಸ್ ನೀಡಿದ್ದಾರೆ. ಇಂತಹ ನೋಟಿಸ್‌ಗೆ ಹೆದರುವುದಿಲ್ಲ. ರಾಜ್ಯದ ಜನರ ಮನಸ್ಸಿನಲ್ಲಿ ಪಾದಯಾತ್ರೆ ಬಗ್ಗೆ ಸದಭಿಪ್ರಾಯ ವ್ಯಕ್ತವಾಗಿತ್ತು. ಮಹಿಳೆಯರು ಎಲ್ಲೆಡೆ ಆರ್ಶೀವಾದ ಮಾಡಿದ್ದರು. ತಿಂಡಿ ತೀರ್ಥ, ಏಳೆನೀರು ನೀಡಿ ಹರಸಿದ್ದರು. ಜನಪರ ಹೋರಾಟ ಎಂಬುದಕ್ಕೆ ಇವೆಲ್ಲವೂ ಸಾಕ್ಷಿ ಎಂದು ಸಿದ್ದರಾಮಯ್ಯ ಹೇಳಿದರು.
ಕೇಂದ್ರದ ಮಾಜಿ ಸಚಿವ ಕೆ.ಎಚ್. ಮುನಿಯಪ್ಪ, ಸಲೀಂ ಅಹಮದ್ ಮತ್ತಿತರ ನಾಯಕರು ಇದ್ದರು.