

ಶಿಕಾರಿಪುರ: ಕಾವೇರಿ ನದಿ ನಮ್ಮ ಉಸಿರು, ನಮ್ಮ ಬದುಕು, ನಮ್ಮ ಬೆಳಕು. ಕಾವೇರಿ ಹೋರಾಟಕ್ಕೆ ನಮ್ಮ ಸಂಘಟನೆ ಸಂಪೂರ್ಣ ಬೆಂಬಲವಿದೆ ಎಂದು ಜಯ ಕರ್ನಾಟಕ ಜನಪರ ವೇದಿಕೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹುಲಗಿ ಕೃಷ್ಣ ಹೇಳಿದರು.
ತಮಿಳುನಾಡಿಗೆ ನೀರು ಹರಿಸಿ ಕಾವೇರಿ ಕೊಳ್ಳ ಬರಿದಾಗಿದೆ. ಸರ್ಕಾರಕ್ಕೆ ರೈತರ ಬಗ್ಗೆ ಕಾಳಜಿಯಿಲ್ಲ. ಅದು ಅಧಿಕಾರಕ್ಕೆ ಅಂಟಿಕೊಂಡಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ದೂರದರು.
ಕಾವೇರಿಯು ಮೈಸೂರು, ಬೆಂಗಳೂರು ಮಹಾನಗರಗಳಿಗೆ ಕುಡಿಯುವ ನೀರಿನ ದಾಹ ನೀಗುತ್ತಾಳೆ. ರೈತರಿಗೆ ಅನ್ನ ನೀಡುತ್ತಾಳೆ. ಕಾವೇರಿ ರಕ್ಷಣೆ ಹೋರಾಟಕ್ಕೆ ಚಿತ್ರ ನಟರೆಲ್ಲರೂ ಬೆಂಬಲ ನೀಡಬೇಕು. ಒಡೆಯರ್ ಅವರು ತಮ್ಮ ಬಳಿಯಿದ್ದ ಚಿನ್ನ ಮಾರಿ ಕೆಆರ್‌ಎಸ್ ನಿರ್ಮಿಸಿ ರೈತರ ಪಾಲಿನ ದೇವರಾಗಿದ್ದಾರೆ. ಆದರೆ ಸರ್ಕಾರ ತಮಿಳುನಾಡಿಗೆ ನೀರು ಬಿಟ್ಟು ರೈತರ ಸಹನೆಯನ್ನು ಪರೀಕ್ಷೆ ಮಾಡುತ್ತಿದೆ. ಇದು ಖಂಡಿತ ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ತಾಲೂಕಿನ ರೈತರು ಬರಗಾಲದಿಂದ ಕಂಗೆಟ್ಟಿದ್ದಾರೆ. ಸರ್ಕಾರ ಕೂಡಲೆ ಅವರ ನೆರವಿಗೆ ಬರಬೇಕು. ತಾಲೂಕಿನಲ್ಲಿ ಬಡವರಿಗೆ ಅನುಕೂಲವಾಗುವ ಇಂದಿರಾ ಕ್ಯಾಂಟೀನ್ ತಕ್ಷಣ ಪ್ರಾರಂಭಿಸಬೇಕು ಎಂದು ಆಗ್ರಹಿಸಿದರು .
ವೇದಿಕೆ ತಾಲೂಕು ಅಧ್ಯಕ್ಷ ಶಿವಯ್ಯ, ಪ್ರಮುಖರಾದ ಹಿರಣ್ಣಯ್ಯ, ವಿಠಲ್, ಇಮ್ರಾನ್, ಮುಕ್ತಂ, ಶಾರುಖ್ ಇತರರಿದ್ದರು.