ಕಾವೇರಿ ಸಮಸ್ಯೆ ಬಗೆಹರಿಸಲು ಕೇಂದ್ರ ಮಧ್ಯ ಪ್ರವೇಶಿಸಲಿ

madhu bangarappa
Published on

ಚಿತ್ರದುರ್ಗ: ಕಾವೇರಿ ವಿಚಾರದಲ್ಲಿ ಕೇಂದ್ರ ಸರ್ಕಾರ ಕೂಡಲೇ ಮಧ್ಯ ಪ್ರವೇಶಿಸಬೇಕು. ಎರಡೂ ರಾಜ್ಯಗಳ ಸಿಎಂ ಜೊತೆ ಚರ್ಚಿಸಿ ಸಮಾಧಾನಕರವಾಗಿ ಸಮಸ್ಯೆ ಇತ್ಯರ್ಥ ಪಡಿಸಬೇಕು ಎಂದು ಶಿಕ್ಷಣ ಸಚಿವ ಎಸ್.ಮಧು ಬಂಗಾರಪ್ಪ ಒತ್ತಾಯಿಸಿದರು.

ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಈ ವಿಚಾರದಲ್ಲಿ ಕೇಂದ್ರ ಜಲ ಆಯೋಗಕ್ಕೆ ಹೆಚ್ಚಿನ ಅಧಿಕಾರ ನೀಡಲಾಗಿದೆ. ಕಾವೇರಿ ಜಲಾಶಯದ ವಾಸ್ತವಾಂಶ ಕೇಂದ್ರ ಸರ್ಕಾರ ಅರಿತುಕೊಳ್ಳಬೇಕು. ರಾಜ್ಯಕ್ಕೆ ನ್ಯಾಯ ಒದಗಿಸಬೇಕು ಎಂದು ಮನವಿ ಮಾಡಿದರು.

ಈ ಹಿಂದೆ ಬಂಗಾರಪ್ಪ ಅವರು ಸಂದಿಗ್ಧ ಸ್ಥಿತಿಯಲ್ಲಿ ತೆಗೆದುಕೊಂಡ ನಿರ್ಧಾರ ಐತಿಹಾಸಿಕ. ಆ ನಂತರ ವಿವಿಧ ಸಿಎಂಗಳು ನೀರು ಬಿಟ್ಟಿದ್ದಾರೆ. ಕೆಲವೊಮ್ಮೆ ನ್ಯಾಯಾಲಯ ಮೊರೆ ಹೋಗಿದ್ದಾರೆ. ಆದರೆ, ಆಗಿನ ಪರಿಸ್ಥಿತಿಗೂ ಈಗಿನ ಪರಿಸ್ಥಿತಿಗೂ ಸಾಕಷ್ಟು ವ್ಯತ್ಯಾಸವಿದೆ. ಈಗ ಜಲಾಶಯದಲ್ಲಿ ನೀರಿನ ಪ್ರಮಾಣ ಬಹಳಷ್ಟು ಕಡಿಮೆ ಇದ್ದು, ನೀರು ಕೊಡಲು ಹೇಗೆ ಸಾಧ್ಯ. ಈ ವಿಚಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಏನೇ ತೀರ್ಮಾನ ಕೈಗೊಂಡರು ಅವರ ಜತೆ ನಿಲ್ಲುತ್ತೇವೆ ಎಂದರು.

ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಮೂಲಸೌಕರ್ಯ ಕೊರತೆ ಇರುವುದು ಗಮನಕ್ಕೆ ಬಂದಿದೆ. ಮುಂದಿನ ದಿನಗಳಲ್ಲಿ ಶಾಶ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಶ್ರಮಿಸಲಿದ್ದೇನೆ. ಹೆಚ್ಚಿನ ಪ್ರಮಾಣದಲ್ಲಿ ಕರ್ನಾಟಕ ಪಬ್ಲಿಕ್ ಶಾಲೆ ತೆರೆಯುವ ಮೂಲಕ ಮಕ್ಕಳ ಸಂಖ್ಯೆ ಹೆಚ್ಚಳಕ್ಕೆ ಕ್ರಮವಹಿಸಲಾಗುವುದು ಎಂದು ಭರವಸೆ ನೀಡಿದರು.

ರಾಜ್ಯದಲ್ಲಿ 53 ಸಾವಿರ ಶಿಕ್ಷಕರ ಕೊರತೆ ಇದ್ದು, ಅದಕ್ಕಾಗಿ 43 ಸಾವಿರ ಅತಿಥಿ ಶಿಕ್ಷಕರನ್ನು ನೇಮಿಸಿಕೊಳ್ಳಲಾಗಿದೆ. 13.5 ಸಾವಿರ ಕಾಯಂ ಶಿಕ್ಷಕರ ನೇಮಕಾತಿ ವಿಚಾರದ ಪ್ರಕರಣ ನ್ಯಾಯಾಲಯದಲ್ಲಿದ್ದು, ಆದೇಶಕ್ಕಾಗಿ ಸರ್ಕಾರ ಕಾಯುತ್ತಿದೆ. ಮಕ್ಕಳಿಗೆ ಒಳ್ಳೆಯದಾಗಲಿ ಎಂಬ ಕಾರಣಕ್ಕೆ ಶೈಕ್ಷಣಿಕವಾಗಿ ಸಾಕಷ್ಟು ಬದಲಾವಣೆ ತರಲಾಗಿದೆ ಎಂದು ಹೇಳಿದರು.

ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ, ಮಾಜಿ ಸಚಿವ ಎಚ್.ಆಂಜನೇಯ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಂ.ಕೆ.ತಾಜ್‌ಪೀರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net