ಕಾವೇರಿ ಸಮಸ್ಯೆ ಪರಿಹಾರಕ್ಕೆ ಕೇಂದ್ರ ಸರ್ಕಾರ ಮುಂದಾಗಲಿ

24M.D.R.6
Published on

ಮದ್ದೂರು: ಕಾವೇರಿ ನದಿ ನೀರಿನ ಋಣದಲ್ಲಿ ನಾವೆಲ್ಲರೂ ಇದ್ದೇವೆ. ಕಾವೇರಿ ನಮ್ಮೆಲ್ಲರಿಗೂ ಒಂದು ರೀತಿಯ ಅಸ್ತ್ರವಾಗಿದೆ. ಇದರ ಶಾಶ್ವತ ಪರಿಹಾರಕ್ಕೆ ಕೇಂದ್ರ ಸರ್ಕಾರ ಮಧ್ಯ ಪ್ರವೇಶ ಮಾಡಿ ಪರಿಹಾರಕ್ಕೆ ಮುಂದಾಗಬೇಕು ಎಂದು ಶ್ರೀ ನಂಜಾವಧೂತ ಸ್ವಾಮೀಜಿ ಸಲಹೆ ನೀಡಿದರು.


ತಾಲೂಕಿನ ಹುಣಸೇಮರದೊಡ್ಡಿ ಗ್ರಾಮದ ಶ್ರೀ ಜಗನ್ಮಾತೆ ಮಾರಮ್ಮ ದೇವಿಯ ನೂತನ ದೇವಾಲಯದ ರಾಜಗೋಪುರ, ವಿಮಾನ ಗೋಪುರ, ನಾಗದೇವತೆ, ವಿಗ್ರಹ ಅಷ್ಟಬಂಧನ ಪ್ರತಿಷ್ಠಾನ ಕಾರ್ಯಕ್ರಮದ ಅಂಗವಾಗಿ ದೇವಾಲಯಲ್ಲಿ ಹಮ್ಮಿಕೊಡಿದ್ದ ವಿವಿಧ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗಿಯಾಗಿ ಶುಕ್ರವಾರ ಮಾತನಾಡಿದರು.


ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಅದರಲ್ಲೂ ಕೇಂದ್ರ ಸರ್ಕಾರ 2 ಸರ್ಕಾರಗಳನ್ನು ಕರೆದು ಕಿವಿಹಿಂಡಿ, ಬುದ್ಧಿ ಹೇಳಿ ನಮ್ಮ ನಾಡಿನ ಕಾವೇರಿ ನದಿ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕೊಡಿಸಬೇಕು ಎಂದರು.


ರಾಜ್ಯದಲ್ಲಿ ಬರವಿದ್ದರೂ, ರೈತರು ಸಂಕಷ್ಟದಲ್ಲಿದಲ್ಲಿದ್ದರೂ ಪರಿಸ್ಥಿತಿ ಅನಿವಾರ್ಯಕ್ಕೆ ಒಳಗಾಗಿ ಕಟ್ಟುಬಿದ್ದು ತಮಿಳುನಾಡಿಗೆ ನೀರು ಬಿಡುವ ಸ್ಥಿತಿ ಸರ್ಕಾರಕ್ಕೆ ಬಂದಿದೆ. ಇಂತಹ ಸಂದರ್ಭದಲ್ಲಿ ಸರ್ಕಾರ ಗಟ್ಟಿ ನಿರ್ಧಾರ ತೆಗೆದುಕೊಳ್ಳಬೇಕು ಸರ್ಕಾರದ ಜತೆ ನಾವು ಇರುತ್ತೇವೆ ಎಂದರು.


ಧಾರ್ಮಿಕ ಕಾರ್ಯಕ್ರಮ ಅಂಗವಾಗಿ ದೇವಾಲಯಲ್ಲಿ ಬೆಳಗ್ಗೆ 7 ಗಂಟೆಗೆ ಜಪ, ವೇದಪಾರಾಯಣ, ವೇದಿಕಾರ್ಚನೆ, ಯಾಗಶಾಲಾ ಪ್ರವೇಶ, ನಾಡಿ ಸಂಧಾನ, ಗಣಪತಿ ಹೋಮ, ನವಗ್ರಹ ಹೋಮ, ಮೃತ್ಯುಂಜಯ ಹೋಮ, ಅಷ್ಟಲಕ್ಷ್ಮೀಹೋಮ, ದುರ್ಗಾ ಹೋಮ, ಮಹಾ ಪೂರ್ಣಾಹುತಿ, ಕುಂಭಾಭಿಷೇಕ, ಶ್ರೀ ದೇವಿಗೆ ಪಂಚಾಮೃತ ಅಭಿಷೇಕ, ವಿಶೇಷ ಅಲಂಕಾರ, ಗೋ ಪೂಜೆ, ಬೆಳಗ್ಗೆ 10 ಗಂಟೆಗೆ ಶ್ರೀಮಾರಮ್ಮದೇವಿ, ಶ್ರೀ ಮುನೇಶ್ವರ ದೇವರ ಹೂ ಹೊಂಬಾಳೆ, ತಂಬಿಟ್ಟಿನ ಆರತಿ ಸಮೇತ ಆಲಯ ಪ್ರವೇಶ, ನಂತರ ಮಹಾಮಂಗಳಾರತಿ ಮಾಡಲಾಯಿತು.


ಮಧ್ಯಾಹ್ನ ಅನ್ನಸಂತರ್ಪಣೆ ಹಮ್ಮಿಕೊಳ್ಳಲಾಗಿತ್ತು. ಸುತ್ತಮುತ್ತ ಗ್ರಾಮಗಳ ಸಾವಿರಾರು ಭಕ್ತರು ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಶಾಸಕ ಕೆ.ಎಂ.ಉದಯ್, ಮಾಜಿ ಸಚಿವ ಡಿ.ಸಿ.ತಮ್ಮಣ್ಣ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕದಲೂರು ರಾಮಕೃಷ್ಣ, ತಿಮ್ಮದಾಸ್ ಹೋಟೆಲ್ ಮಾಲೀಕ ಸಿ.ಟಿ.ಶಂಕರ್, ಮುಖಂಡ ಮಾದನಾಯಕನಹಳ್ಳಿ ರಾಜಣ್ಣ ಸೇರಿದಂತೆ ಇತರರು ಆಗಮಿಸಿ ದೇವರ ದರ್ಶನ ಪಡೆದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net