

ಮೈಸೂರು: ಕಾವೇರಿ ನದಿ ನೀರು ಹಂಚಿಕೆ ವಿಷಯದಲ್ಲಿ ಮಳೆ ಕೊರತೆಯಿಂದ ಉಂಟಾಗುವ ಸಂಕಷ್ಟ ಪರಿಸ್ಥಿತಿಗೆ ಮೇಕೆದಾಟು ಯೋಜನೆ ಪರಿಹಾರವಾಗಿದೆ ಎಂದು ನಿವೃತ್ತ ಐಪಿಎಸ್ ಅಧಿಕಾರಿ ಡಾ.ಚಂದ್ರಶೇಖರ್ ತಿಳಿಸಿದರು.
ರಾಜ್ಯ ರೈತ ಸಂಘದ ಯುವ ಘಟಕದ ವತಿಯಿಂದ ನಗರದ ಕೃಷಿ ಮಾರುಕಟ್ಟೆ ಅಧ್ಯಯನ ಸಂಸ್ಥೆಯಲ್ಲಿ ಶುಕ್ರವಾರ ಆಯೋಜಿಸಿದ್ದ ‘ಕಾವೇರಿ ವಿವಾದ ಕುರಿತು ನ್ಯಾಯಾಧೀಕರಣದ ತೀರ್ಪು; ಪ್ರಸ್ತುತ ಸಮಸ್ಯೆಗಳು, ಪರಿಹಾರೋಪಾಯಗಳ’ ಕುರಿತು ವಿಚಾರ ಸಂಕಿರಣದಲ್ಲಿ ಮಾತನಾಡಿದರು
ಹೆಚ್ಚುವರಿ ನೀರು ದೊರೆಯುವ ಕಾರಣದಿಂದ ತಮಿಳುನಾಡು ಸರ್ಕಾರ ಮೇಕೆದಾಟು ಯೋಜನೆಗೆ ವಿರೋಧ ವ್ಯಕ್ತಪಡಿಸುತ್ತಿದೆ. ಹೆಚ್ಚು ಮಳೆಯಾದಾಗ ಕಾವೇರಿ, ಕಬಿನಿ ಅಣೆಕಟ್ಟೆಗಳಲ್ಲಿ ನೀರು ಶೇಖರಣೆ ಮಾಡಿಕೊಳ್ಳಲಾಗದು. ಹೆಚ್ಚುವರಿ ನೀರನ್ನು ಮೇಕೆದಾಟು ಅಣೆಕಟ್ಟೆಯಲ್ಲಿ ಶೇಖರಿಸಿದರೆ ಮಳೆ ಕೊರತೆಯಾದಾಗ ಸಹಾಯಕ್ಕೆ ಬರುತ್ತದೆ ಎಂದರು
1924ರ ಒಪ್ಪಂದದಲ್ಲಿ ಮೇಕೆದಾಟು ಅಣೆಕಟ್ಟು ಕಟ್ಟಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಈ ಅಂಶವನ್ನು ಸುಪ್ರೀಂ ಕೋರ್ಟ್ ಅಥವಾ ನ್ಯಾಯಾಧೀಕರಣ ಎದುರು ಕಾನೂನು ಸಮರ ಆರಂಭಿಸಲು ಸಾಧ್ಯವಾಗಬಹುದು. ಇದರಿಂದ ನಮ್ಮ ಸಂಕಷ್ಟಕ್ಕೆ ಪರಿಹಾರವೂ ಸಿಗಬಹುದು ಎಂದು ಹೇಳಿದರು.
ಕಾವೇರಿ ನೀರು ಹಂಚಿಕೆ ವಿವಾದ ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳ ವಸ್ತುಸ್ಥಿತಿ 20 ವರ್ಷಗಳ ಹಿಂದೆ ಹೇಗಿತ್ತು? ಈಗಲೂ ಅದೇ ಸ್ಥಿತಿಯಲ್ಲಿದೆ. ಯಾವುದೇ ಬದಲಾವಣೆ ಇಲ್ಲ. ಸರ್ಕಾರ, ರೈತರು, ನೀರಾವರಿ ತಜ್ಞರು ಸಂಪೂರ್ಣವಾಗಿ ತೊಡಗಿಸಿಕೊಂಡು ಈ ಸಮಸ್ಯೆಯನ್ನು ಬಗೆಹರಿಸಬೇಕಿದೆ ಎಂದು ಸಲಹೆ ನೀಡಿದರು.
ಕೇರಳ ರಾಜ್ಯಕ್ಕೆ ನೀಡಿರುವ 30 ಟಿಎಂಸಿ ನೀರನ್ನು ತಮಿಳುನಾಡು ಮಾತ್ರ ಬಳಕೆ ಮಾಡಿಕೊಳ್ಳಬೇಕು. ಇದರಲ್ಲಿ ಅರ್ಧಪಾಲು ಕರ್ನಾಟಕಕ್ಕೆ ದೊರೆಯಬೇಕೆಂದು ಏಕೆ ಕೇಳಲಿಲ್ಲ? ತಮಿಳುನಾಡು 3 ಬೆಳೆ ಬೆಳೆಯುತ್ತಿದೆ. ಕಳೆದ ವರ್ಷ ಶೇ.300ರಷ್ಟು ಹೆಚ್ಚುವರಿ ನೀರು ಪೂರೈಕೆ ಮಾಡಿದ್ದು, ಸಕಾಲದಲ್ಲಿ ಮಳೆಯಾಗುತ್ತಿಲ್ಲ ಎಂಬುದನ್ನು ಕೋರ್ಟ್‌ಗೆ ಮನವರಿಕೆ ಮಾಡಲಾಗಿಲ್ಲ ಎಂದು ಕಿಡಿಕಾರಿದರು
ಕಾವೇರಿ ನೀರು ಹಂಚಿಕೆ ಸಂಬಂಧ ಸಂಕಷ್ಟದ ಸಮಯದಲ್ಲಿ ಮಾತ್ರ ಕಾನೂನು ತೊಡಕುಗಳ ಬಗ್ಗೆ ಚರ್ಚೆ ಮಾಡಲಾಗುತ್ತದೆ. ಉಳಿದ ಸಮಯದಲ್ಲಿ ಚರ್ಚೆಯನ್ನೇ ಮಾಡಲ್ಲ. ಇದರಿಂದಾಗಿ 200 ವರ್ಷಗಳಿಂದಲೂ ಕಾನೂನು ಹೋರಾಟದಲ್ಲಿ ಕರ್ನಾಟಕ ಹಿನ್ನಡೆ ಕಂಡಿದೆ ಎಂದು ತಿಳಿಸಿದರು.
1888ರಿಂದ ಇಲ್ಲಿಯವರೆಗೆ ನಡೆದ ಎಲ್ಲ ಕಾನೂನು ವಿವಾದಗಳಲ್ಲಿ ಕರ್ನಾಟಕ ಸೋಲು ಅನುಭವಿಸಿದೆ. 1892ರ ಮೊದಲನೇ ಒಪ್ಪಂದ, 1924ರ 2ನೇ ಒಪ್ಪಂದ, ಮಧ್ಯಂತರ ಆದೇಶ, ಕಾವೇರಿ ನ್ಯಾಯಾಧೀಕರಣದ ಆದೇಶ ಕುರಿತು ಕರ್ನಾಟಕ ತನ್ನ ವಾದವನ್ನು ಸಮರ್ಥವಾಗಿ ಮಂಡಿಸಲಿಲ್ಲ ಎಂದು ಹೇಳಿದರು.
ಕಾನೂನಿನ ತೀರ್ಪಿನಲ್ಲಿ ಬದಲಾವಣೆ ಬೇಕು. ವೈಜ್ಞಾನಿಕ ವರದಿ ನೀಡಿಲ್ಲ. ಅನೇಕ ತೀರ್ಪುಗಳ ಬಗ್ಗೆ ಸ್ಪಷ್ಟತೆ ಇಲ್ಲ. ಈ ವಿಷಯಗಳನ್ನು ಕೋರ್ಟ್ ಅಥವಾ ನ್ಯಾಯಾಧೀಕರಣದ ಮುಂದೆ ಮಂಡಿಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು
ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ, ಮುಖಂಡರಾದ ಪ್ರಸನ್ನ ಎನ್.ಗೌಡ, ಹೊಸಕೋಟೆ ಬಸವರಾಜು ಇನ್ನಿತರರಿದ್ದರು.