

ಮದ್ದೂರು: ಕಾವೇರಿ ಪತ್ತಿನ ಸಹಕಾರ ಸಂಘಕ್ಕೆ ನೂತನ ಅಧ್ಯಕ್ಷರಾಗಿ ಬೊಮ್ಮನದೊಡ್ಡಿ ಗ್ರಾಮದ ಬಿ.ಎಸ್.ರವೀಂದ್ರ ಅವಿರೋಧವಾಗಿ ಆಯ್ಕೆಯಾದರು.
ಎಂ.ಸಿ.ರೇಣುಕುಮಾರ್ ಅವರ ರಾಜೀನಾಮೆಯಿಂದ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಸೋಮವಾರ ನಡೆದ ಚುನಾವಣೆಯಲ್ಲಿ ಬಿ.ಎಸ್.ರವೀಂದ್ರ ಹೊರತುಪಡಿಸಿ ಬೇರಾರು ನಾಮಪತ್ರ ಸಲ್ಲಿಸದ ಕಾರಣ ಚುನಾವಣಾಧಿಕಾರಿ ಸಂತೋಷ್ ಅವಿರೋಧ ಆಯ್ಕೆಯನ್ನು ಪ್ರಕಟಿಸಿದರು.ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಬಿ.ಎಸ್.ರವೀಂದ್ರ ಅವರನ್ನು ಸಂಘದ ನಿರ್ದೇಶಕರು ಹಾಗೂ ಸ್ಥಳೀಯ ಮುಖಂಡರು ಅಭಿನಂದಿಸಿದರು.
ಅಭಿನಂದನೆ ಸ್ವೀಕರಿಸಿ ಮಾತನಾಡಿದ ನೂತನ ಅಧ್ಯಕ್ಷ ಬಿ.ಎಸ್.ರವೀಂದ್ರ ತಮ್ಮನ್ನು ಅಧ್ಯಕ್ಷರನ್ನಾಗಿಸಲು ಶ್ರಮಿಸಿದ ಸಹಕಾರ ಸಂಘದ ನಿರ್ದೇಶಕರಿಗೆ ಹಾಗೂ ಸ್ಥಳೀಯ ಮುಖಂಡರಿಗೆ ಅಭಿನಂದನೆ ಸಲ್ಲಿಸಿದರು. ತಮ್ಮ ಮೇಲೆ ನಂಬಿಕೆಯಿಟ್ಟು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದು, ಯಾವುದೇ ಚ್ಯುತಿ ಬಾರದಂತೆ ಶ್ರದ್ಧೆ ಪ್ರಾಮಣಿಕತೆಯಿಂದ ಕರ್ತವ್ಯ ನಿರ್ವಹಿಸುವುದಾಗಿ ಹೇಳಿದರು.
ಸಹಕಾರ ಸಂಘದ ಶ್ರೇಯೋಭಿವೃದ್ಧಿಗೆ ಶಕ್ತಿ ಮೀರಿ ಶ್ರಮಿಸಲಿದ್ದು, ಎಲ್ಲರ ಸಹಕಾರ ಅತ್ಯಗತ್ಯವೆಂದ ಅವರು, ಈಗಾಗಲೇ ಸಹಕಾರ ಸಂಘದಲ್ಲಿ 1300 ಮಂದಿ ಸದಸ್ಯರಿದ್ದು, ಮೂರು ಕೋಟಿಗೂ ಹೆಚ್ಚು ವಾರ್ಷಿಕ ವಹಿವಾಟು ನಡೆಸುವ ಸಂಸ್ಥೆಯು ಸುಮಾರು 70 ಲಕ್ಷ ರೂ. ವ್ಯಾಪಾರ ಅಭಿವೃದ್ಧಿ ಸಾಲ, ಪಿಗ್ಮಿ, ಆಭರಣ ಹಾಗೂ ಸ್ವಸಹಾಯ ಸಂಘಗಳಿಗೆ ಸಾಲ ವಿತರಿಸಿರುವುದಾಗಿ ವಿವರಿಸಿದರು.
ಸಾಲ ಪಡೆದ ಸದಸ್ಯರು ಸಕಾಲದಲ್ಲಿ ಸಾಲ ಮರುಪಾವತಿಸುವ ಮೂಲಕ ಸಂಘದ ಶ್ರೇಯೋಭಿವೃದ್ಧಿಗೆ ಮುಂದಾಗುವಂತೆ ಮುಂದಿನ ದಿನಗಳಲ್ಲಿ ಷೇರುದಾರರಿಗೆ ಮತ್ತಷ್ಟು ಸೌಲಭ್ಯ ಕಲ್ಪಿಸಲು ಯೋಜನೆ ರೂಪಿಸುವುದಾಗಿ ತಿಳಿಸಿದರು.
ಉಪಾಧ್ಯಕ್ಷೆ ಶೈಲಜಾ, ನಿರ್ದೇಶಕರಾದ ಬಿ.ಎಂ.ಗುರುಲಿಂಗಯ್ಯ, ಸತೀಶ್, ನಾಗೇಂದ್ರ, ಚಂದ್ರಣ್ಣ, ರಾಮಚಂದ್ರು, ಬಿ.ಎಸ್.ನಂಜುಂಡಸ್ವಾಮಿ, ಶೈಲಾ, ಸಿ.ಡಿ.ಸಂತೋಷ್, ಎ.ಸಿ.ಕುಮಾರ್, ನಾಗಭೂಷಣ್, ಬಿ.ಎಸ್.ನಾಗರತ್ನಾ ಇತರರಿದ್ದರು.