ಕಾವೇರಿ ನೀರು ಹಂಚಿಕೆ ಸಂಬಂಧ ಸಂಕಷ್ಟ ಸೂತ್ರ ರಚಿಸಲು ಆಗ್ರಹ

ಕಾವೇರಿ ನೀರು ಹಂಚಿಕೆ ಸಂಬಂಧ ಸಂಕಷ್ಟ ಸೂತ್ರ ರಚಿಸಲು ಆಗ್ರಹ
Published on

ಹಾಸನ: ಕಾವೇರಿ ಜಲಾನಯನ ಪ್ರದೇಶದ ರೈತರ ಹಿತವನ್ನು ಬಲಿ ಕೊಟ್ಟು ತಮಿಳುನಾಡಿಗೆ ನೀರು ಹರಿಬಿಡುತ್ತಿರುವ ಸರ್ಕಾರದ ನೀತಿಯನ್ನು ಕದಂಬ ಸೈನ್ಯ ಖಂಡಿಸುತ್ತದೆ ಎಂದು ರಾಜ್ಯ ಸಂಘಟನೆ ಅಧ್ಯಕ್ಷ ಬೇಕ್ರಿ ರಮೇಶ್ ಕೆ. ಹೇಳಿದರು.

ಮಳೆ ಕೊರತೆಯಾದಾಗ ಮಾತ್ರ ಸಮಸ್ಯೆ ತಲೆದೋರುತ್ತದೆ.ಮಳೆ ಕೊರತೆಯಾದಾಗ ಏನು ಮಾಡಬೇಕು ಎಂಬುದನ್ನು ವಿವರಿಸುವ ಸಂಕಷ್ಟ ಸೂತ್ರ ಇಲ್ಲದಿರುವುದೇ ಎರಡು ರಾಜ್ಯಗಳ ನಡುವಣ ನೀರು ಹಂಚಿಕೆ ವಿವಾದವನ್ನು ಜೀವಂತವಾಗಿ ಇರಿಸಿದೆ. ಕರ್ನಾಟಕ ಎಷ್ಟು ನೀರು ಉಳಿಸಿಕೊಳ್ಳಬೇಕು. ತಮಿಳುನಾಡಿಗೆ ಎಷ್ಟು ನೀರು ಬಿಡುಗಡೆ ಮಾಡಬೇಕು ಎಂಬ ಯಾವುದೇ ಲೆಕ್ಕಾಚಾರ ಇಲ್ಲ. ಕಾವೇರಿ ಜಲಾನಯನ ಪ್ರದೇಶದ ರೈತರ ಹಿತವನ್ನು ಬಲಿ ಕೊಟ್ಟು ತಮಿಳುನಾಡಿಗೆ ಎಲ್ಲಾ ಸರ್ಕಾರಗಳು ನೀರು ಬಿಟ್ಟಿವೆ. ಇದಕ್ಕೆ ಪ್ರಮುಖ ಕಾರಣ ಆಡಳಿತ ಪಕ್ಷ, ವಿರೋಧ ಪಕ್ಷಗಳ ಇಚ್ಛಾಶಕ್ತಿ ಕೊರತೆ. ರಾಜ್ಯದ ಸಂಸದರು ಗಟ್ಟಿ ಧ್ವನಿ ಎತ್ತದಿರುವ ಕಾರಣ ಕೇಂದ್ರ ಸರ್ಕಾರ ಮಧ್ಯೆ ಪ್ರವೇಶಿಸುತ್ತಿಲ್ಲ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.

ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ನೀರು ಬಿಡುಗಡೆ ಮಾಡುವಂತೆ ಆದೇಶಿಸಿರುವುದು ತಪ್ಪಲ್ಲ. ಆದರೆ ನೀರು ಬಿಡುವ ರಾಜ್ಯದಲ್ಲಿ ಮಳೆ ಎಷ್ಟು ಸುರಿದಿದೆ ಎನ್ನುವುದರ ಗ್ರೌಂಡ್ ರಿಪೋರ್ಟ್ ಪರಿಶೀಲಿಸದೆ ಪ್ರಾಧಿಕಾರ ಆದೇಶ ಮಾಡಿರುವುದು ವಿಪರ್ಯಾಸ. ಪ್ರಾಧಿಕಾರದ ತಂಡ ಕಾವೇರಿ ಜಲಾನಯನ ಪ್ರದೇಶದಲ್ಲಿ ಸಂಚರಿಸಿ ವಾಸ್ತವ ಚಿತ್ರಣವನ್ನು ಸುಪ್ರೀಂಕೋರ್ಟ್, ಕೇಂದ್ರ ಸರ್ಕಾರದ ಮುಂದೆ ಮಂಡಿಸಬೇಕು. ರಾಜ್ಯದಲ್ಲಿ ತೇವಾಂಶ ಪತ್ತೆ ಹಚ್ಚಲು ಡ್ರೋನ್ ನಂತಹ ತಂತ್ರಜ್ಞಾನ ಬಳಕೆಯಾಗುತ್ತಿರುವಾಗ ಏಕೆ ಮಾಡುತ್ತಿಲ್ಲ? ನೀರು ಬಿಡುಗಡೆ ಮಾಡುವಂತೆ ನಿರ್ದೇಶನ ನೀಡುವುದೇ ಪ್ರಾಧಿಕಾರದ ಕೆಲಸವಾಗಿದೆ. ಏಕಾಏಕಿ ನೀರು ಬಿಡುಗಡೆ ಮಾಡುವಂತೆ ಆದೇಶ ಮಾಡಿರುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ರಾಜಕೀಯ ಒಲವು ನಿಲುವುಗಳನ್ನು ಬದಿಗಿರಿಸಿ. ಎಲ್ಲ ಸಂಸದರು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕಬೇಕಿದೆ. ವಾಸ್ತಾವಾಂಶ ಆಧರಿಸಿ, ಕೇಂದ್ರ ಸರ್ಕಾರವು ಸಂಕಷ್ಟ ಸೂತ್ರ ರಚಿಸುವ ಮೂಲಕ ಕರ್ನಾಟಕದ ರೈತರಿಗೆ ಪರಿಹಾರ ರೂಪಿಸುವ ಕೆಲಸವನ್ನು ತುರ್ತು ಮಾಡಬೇಕಿದೆ. ಕಾವೇರಿ ಜಲಾನಯನ ಪ್ರದೇಶದ ರೈತರು, ಜನರು ಸಂಕಷ್ಟಕ್ಕೆ ಸಿಲುಕಿರುವಾಗ ಕನ್ನಡ ಚಲನಚಿತ್ರರಂಗ ಖ್ಯಾತ ನಟ-ನಟಿಯರು, ಕಿರುತೆರೆ ರಂಗದವರು ದಿವ್ಯ ಮೌನಕ್ಕೆ ಶರಣಾಗಿದ್ದಾರೆ. ಅವರು ಕಾವೇರಿ ನೀರನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಹೋರಾಟಕ್ಕೆ ಇಳಿಯಬೇಕು. ಇಲ್ಲದಿದ್ದರೆ ಚಿತ್ರರಂಗದವರು ಕನ್ನಡ ವಿರೋಧಿತನ ತೋರಿಸುತ್ತಿದ್ದಾರೆ ಎಂದು ಆರೋಪಿಸಿ ಕನ್ನಡ ಚಿತ್ರಗಳನ್ನು ಬಹಿಷ್ಕರಿಸಲು ಕರೆ ನೀಡಬೇಕಾಗುತ್ತದೆ ಎಂದು ಎಚ್ಚರಿಗೆ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಕದಂಬ ಸೈನ್ಯದ ಉಪಾಧ್ಯಕ್ಷ ಡಾ ದೇವನಹಳ್ಳಿ ದೇವರಾಜ್, ರಾಜ್ಯ ಸಂಚಾಲಕ ಶಿವಕುಮಾರ್, ರಾಜ್ಯ ಸಮಿತಿ ಸದಸ್ಯ ಆರಾಧ್ಯ ಗುಡಗೇನಹಳ್ಳಿ, ಮಂಡ್ಯ ಪುಟ್ಟಸ್ವಾಮಿ, ಮಂಡ್ಯ ಜಿಲ್ಲಾ ಉಪಾಧ್ಯಕ್ಷ ರಾಮು ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net