

ಎಚ್.ಡಿ.ಕೋಟೆ: ಕಾವೇರಿ ನೀರು ನಿರ್ವಹಣಾ ಸಮಿತಿ ತೀರ್ಮಾನವನ್ನು ವಿರೋಧಿಸಿ ರಾಜ್ಯ ರೈತ ಸಂಘದ ವತಿಯಿಂದ ತಾಲೂಕಿನ ಕಬಿನಿ ಜಲಾಶಯದ ನೀರಾವರಿ ಇಲಾಖೆ ಕಚೇರಿ ಎದುರು ಗುರುವಾರ ಪ್ರತಿಭಟನೆ ನಡೆಯಿತು.
ಕಬಿನಿ ಜಲಾಶಯದ ಕಾರ್ಯ ಪಾಲಕ ಇಂಜಿಯರ್ ಕಚೇರಿ ಆವರಣದಲ್ಲಿ ಜಮಾಯಿಸಿದ ಪ್ರತಿಭಟನಾಕಾರರು, ರಾಜ್ಯದಲ್ಲಿ ನದಿಗಳು ನೀರಿಲ್ಲದೆ ಬತ್ತಿಹೋಗಿವೆ. ಆದರೆ ನೀರಾವರಿ ಸಲಹಾ ಮಂಡಳಿ ರಾಜ್ಯದಿಂದ ತಮಿಳುನಾಡಿಗೆ ನೀರು ಬಿಡಬೇಕು ಎಂದು ತೀರ್ಪು ನೀಡಿರುವುದು ರಾಜ್ಯದ ರೈತರಿಗೆ ದ್ರೋಹ ಮಾಡಿದೆ.
ರಾಜ್ಯದಲ್ಲಿ ಮಳೆ ಕೊರತೆಯಿಂದಾಗಿ ನೀರಾವರಿ ಜಲಾಶಯಗಳಿಗೆ ಒಳಹರಿವು ಕಡಿಮೆ ಇದೆ. ಅಲ್ಲದೆ ಇದೂವರೆಗೆ ಜಲಾಶಯಗಳ ನೀರಿನ ಶೇಖರಣೆಯೂ ಕಡಿಮೆ ಆಗಿದೆ. ನೀರಾವರಿಗೆ ಉಪಯೋಗಿಸಲು ಸಾಧ್ಯವಿರುವ ನೀರು ಕಡಿಮೆ ಇದ್ದು, ಕಾವೇರಿ ನೀರು ನಿರ್ವಹಣಾ ಸಮಿತಿಯ ನಿರ್ದೇಶನದಂತೆ ರಾಜ್ಯದ ಜಲಾಶಯಗಳಿಂದ ತಮಿಳುನಾಡಿಗೆ 15 ದಿನಗಳವರೆಗೆ 5 ಸಾವಿರ ಕ್ಯೂಸೆಕ್ ನೀರು ಹರಿಸಿದರೆ ಅಚ್ಚುಕಟ್ಟು ವ್ಯಾಪ್ತಿಯಲ್ಲಿ ಬೆಳೆದಿರುವ ಫಸಲು ಉಳಿಸುವುದಿರಲಿ ಕುಡಿಯುವ ನೀರಿಗೆ ಹಾಹಾಕಾರವಾಗಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನೀರಾವರಿ ಇಲಾಖೆ ಕಾರ್ಯಪಾಲಕ ಇಂಜಿನಿಯರ್ ಚಂದ್ರಶೇಖರ್ ಅವರ ಮೂಲಕ ಮುಖ್ಯಮಂತ್ರಿ ಮನವಿ ಪತ್ರ ಸಲ್ಲಿಸಿದರು. ಪ್ರತಿಭಟನೆಯಲ್ಲಿ ತಾಲೂಕು ರೈತ ಸಂಘದ ಅಧ್ಯಕ್ಷ ಮಹಾದೇವನಾಯಕ, ಸರಗೂರು ತಾಲೂಕು ಅಧ್ಯಕ್ಷ ಸಿಂಗೇಗೌಡ, ಪಿ.ಪಳನಿಸ್ವಾಮಿ, ದಯಾನಂದ, ದೇವಮ್ಮ, ನಂದೀಶ, ಚನ್ನನಾಯಕ, ಪುಟ್ಟಣ್ಣ, ನಾಗರಾಜು, ಗಣೇಶ, ಶಿವಲಿಂಗಪ್ಪ, ಗೋವಿಂದೇಗೌಡ, ಮರಾಂಕಯ್ಯ ಇದ್ದರು.