ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ತೀರ್ಮಾನಕ್ಕೆ ರಾಜ್ಯ ರೈತ ಸಂಘದಿಂದ ಪ್ರತಿಭಟನೆ

19
Published on

ಮೈಸೂರು: ತಮಿಳುನಾಡಿಗೆ ನೀರು ಬಿಡುಬೇಕು ಎನ್ನುವ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (ಸಿಡಬ್ಲೂೃಎಂಎ)ದ ತೀರ್ಮಾನ ಖಂಡಿಸಿ ಕರ್ನಾಟಕ ರಾಜ್ಯ ರೈತ ಸಂಘದ ವತಿಯಿಂದ ಕಾಡಾ ಕಚೇರಿ ಮುಂಭಾಗ ಮಂಗಳವಾರ ಪ್ರತಿಭಟನೆ ನಡೆಸಲಾಯಿತು.
ರಾಜ್ಯದಲ್ಲಿ ಮಳೆ ಕೊರತೆಯಿಂದಾಗಿ ಜಲಾಶಯಗಳಿಗೆ ಒಳಹರಿವು ಕಡಿಮೆ ಆಗಿದೆ. ಅಲ್ಲದೆ, ಇದುವರೆಗೆ ಜಲಾಶಯಗಳ ನೀರಿನ ಸಂಗ್ರಹ ಕುಸಿದಿರುವುದು ಕಳವಳಕಾರಿಯಾಗಿದೆ. ಉಪಯೋಗಿಸಲು ಸಾಧ್ಯವಿರುವ ನೀರು ಕಡಿಮೆ ಇದ್ದು, ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ನಿರ್ದೇಶನದಂತೆ ತಮಿಳುನಾಡಿಗೆ 15 ದಿನ 5 ಸಾವಿರ ಕ್ಯೂಸೆಕ್ ನೀರು ಹರಿಸಿದರೆ ಅಚ್ಚುಕಟ್ಟು ವ್ಯಾಪ್ತಿಯಲ್ಲಿ ಬೆಳೆದಿರುವ ಫಸಲು ಉಳಿಸುವುದಿರಲಿ, ಕುಡಿಯುವ ನೀರಿಗೂ ಹಾಹಾಕಾರವಾಗಲಿದೆ ಎಂದು ದೂರಿದರು.
ತಮಿಳುನಾಡಿಗೆ ನೀರು ಹರಿಸದಿರುವ ತೀರ್ಮಾನ ಕೈಗೊಂಡು ಕಾನೂನು ಹೋರಾಟಕ್ಕೆ ಮುಂದಾಗಬೇಕು. ಅಗತ್ಯ ಇರುವ ಎಲ್ಲ ಕ್ರಮಗಳನ್ನು ಅನುಸರಿಸಿ ರಾಜ್ಯದ ರೈತರ ರಕ್ಷಣೆ ಮಾಡಬೇಕು ಎಂದು ಒತ್ತಾಯಿಸಿದರು.
ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ, ಜಿಲ್ಲಾಧ್ಯಕ್ಷ ಹೊಸೂರು ಕುಮಾರ್, ಪ್ರಧಾನ ಕಾರ್ಯದರ್ಶಿ ಹೊಸಕೋಟೆ ಬಸವರಾಜ್, ಮುಖಂಡರಾದ ಮಂಡಕಳ್ಳಿ ಮಹೇಶ್, ಶಿವನಂಜು ಅತ್ತಹಳ್ಳಿ, ಶಿರಮಳ್ಳಿ ಸಿದ್ದಪ್ಪ, ಹುಚ್ಚೇಗೌಡ, ಬಕ್ಕಳ್ಳಿ ನಂಜುಂಡಸ್ವಾಮಿ, ವಿಜೇಂದ್ರ ನಾಗನಹಳ್ಳಿ, ಆನಂದೂರು ಪ್ರಭಾಕರ್, ಸಿದ್ದಪ್ಪ ಹೊಸಕೋಟೆ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net