ಕಾವೇರಿ ನೀರಾವರಿ ನಿಗಮದ ಕಚೇರಿ ಮುಂದೆ ರೈತರ ಧರಣಿ

JULY-2025-17-01
Published on

ಮದ್ದೂರು: ವಿ.ಸಿ.ನಾಲೆ ಕೊನೆ ಭಾಗದ ನಾಲೆಗಳಿಗೆ ನೀರು ಹರಿಸುವಂತೆ ಒತ್ತಾಯಿಸಿ ರೈತ ಸಂಘಟನೆ ಕಾವೇರಿ ನೀರಾವರಿ ನಿಗಮದ ಕಚೇರಿ ಬಳಿ ಪ್ರತಿಭಟನೆ ನಡೆಸಿದರು.

ಪಟ್ಟಣದ ಕಾವೇರಿ ನೀರಾವರಿ ನಿಗಮದ ಕಚೇರಿ ಬಳಿ ಜಮಾವಣೆಗೊಂಡ ರೈತ ಸಂಘದ ಕಾರ್ಯಕರ್ತರು ರಾಜ್ಯ ಸರ್ಕಾರ ಮತ್ತು ನೀರಾವರಿ ಇಲಾಖೆ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರಲ್ಲದೆ ಕೂಡಲೇ ನಾಲೆಗಳಿಗೆ ನೀರು ಹರಿಸುವಂತೆ ಆಗ್ರಹಿಸಿದರು.

ಮುಂಗಾರು ಮಳೆ ಆರಂಭಗೊಂಡು ಕೆಆರ್‌ಎಸ್ ಅಣೆಕಟ್ಟೆ ಭರ್ತಿಯಾಗಿ ಒಂದು ತಿಂಗಳು ಕಳೆದಿದ್ದರೂ ನಾಲೆಗಳಿಗೆ ನೀರು ಹರಿಸದೆ ಜಿಲ್ಲಾಡಳಿತ ನಿರ್ಲಕ್ಷೃ ಧೋರಣೆ ಅನುಸರಿಸುತ್ತಿದ್ದು, ಬೇಸಾಯವನ್ನೇ ನಂಬಿ ಜೀವನ ಸಾಗಿಸುತ್ತಿರುವ ರೈತ ಕುಟುಂಬಗಳು ಸಂಕಷ್ಟ ಅನುಭವಿಸುವಂತಾಗಿದೆ ಎಂದು ದೂರಿದರು.

ಸಮರ್ಪಕವಾಗಿ ಮಳೆಯಾದ ಹಿನ್ನೆಲೆಯಲ್ಲಿ ರೈತರು ತಮ್ಮ ಜಮೀನುಗಳಲ್ಲಿ ಭತ್ತದ ಸಸಿ ಮಡಿ ಮಾಡಲು ಅಗತ್ಯ ಸಿದ್ಧತೆಗಳನ್ನು ಕೈಗೊಂಡು ಮುಂದಿನ ಬೆಳೆ ಬೆಳೆಯಲು ಅಣಿಯಾಗುತ್ತಿದ್ದರೂ ನಾಲೆಗಳಲ್ಲಿ ನೀರು ಹರಿಯದ ಕಾರಣ ಯಾವುದೇ ಭತ್ತದ ಸಸಿ ಮತ್ತು ಇನ್ನಿತರ ಬೆಳೆಗಳನ್ನು ಬೆಳೆಯಲು ವಿಳಂಬವಾಗುತ್ತಿರುವುದಾಗಿ ಆರೋಪಿಸಿದರು.

ಜಿಲ್ಲೆ ಹಾಗೂ ತಾಲೂಕಿನ ವಿವಿಧೆಡೆ ನಡೆಯುತ್ತಿರುವ ನಾಲಾ ಕಾಮಗಾರಿಯನ್ನು ಮುಂದೂಡುವಂತೆ ಆಗ್ರಹಿಸಿದರಲ್ಲದೆ ಈಗಾಗಲೇ ರೈತರು ಬೆಳೆದ ಬೆಳೆಗಳಿಗೆ ವೈಜ್ಞಾನಿಕ ಬೆಲೆ ನಿಗದಿ ಮಾಡದೆ ಸರ್ಕಾರ ನಿರ್ಲಕ್ಷಿಸುತ್ತಿದ್ದು. ರೈತರ ಹೆಸರೇಳಿಅಧಿಕಾರಕ್ಕೆ ಬಂದ ಸರ್ಕಾರ ರೈತ ವಿರೋಧಿ ನೀತಿ ಅನುಸರಿಸುತ್ತಿದೆ ಎಂದರು.

ಕೆ.ಆರ್.ಎಸ್ ಅಣೆಕಟ್ಟೆ ಭರ್ತಿಯಾಗಿದ್ದರೂ ಕೆರೆ ಕಟ್ಟೆಗಳಿಗೆ ನೀರು ತುಂಬಿಸಲು ಕ್ರಮ ಕೈಗೊಂಡಿಲ್ಲ. ಬೇಸಾಯದ ಜತೆಗೆ ಜನ ಜಾನುವಾರುಗಳಿಗೂ ನೀರಿಲ್ಲದಂತ ಪರಿಸ್ಥಿತಿ ನಿರ್ಮಾಣಗೊಂಡಿದ್ದು, ಕೂಡಲೇ ಕೆರೆಕಟ್ಟೆಗಳನ್ನು ತುಂಬಿಸಿ ಮುಂದಿನ ಬೇಸಾಯಕ್ಕೆ ಅನುಕೂಲ ಕಲ್ಪಿಸಬೇಕೆಂದು ಆಗ್ರಹಿಸಿದರು.

ಮುಂದಿನ ಒಂದು ವಾರದೊಳಗಾಗಿ ವಿ.ಸಿ.ನಾಲೆಯ ಕೊನೆ ಭಾಗದ ಜಮೀನುಗಳಿಗೆ ನೀರು ಹರಿಸದಿದ್ದಲ್ಲಿ ಜಿಲ್ಲೆಯಾದ್ಯಂತ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ಎಚ್ಚರಿಕೆ ನೀಡಿದರು.

ಪ್ರತಿಭಟನೆ ವೇಳೆ ರೈತ ಸಂಘಟನೆ ಮುಖಂಡರಾದ ಲಿಂಗಪ್ಪಾಜಿ, ಗೊಲ್ಲರದೊಡ್ಡಿ ಅಶೋಕ್, ದಯಾನಂದ್, ಜಿ.ಎಸ್.ಶಂಕರ್, ರವಿಕುಮಾರ್, ಬೆಟ್ಟೇಗೌಡ, ರೇವಣ್ಣ, ರವಿಕುಮಾರ್, ವಿನೋದ್‌ಬಾಬು, ಉಮೇಶ್, ಎಚ್.ರವಿ, ಶಿವಕುಮಾರ, ಶಶಿ ಕೋಣಸಾಲೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net