

ಮೈಸೂರು: ಕೆಆರ್‌ಎಸ್‌ನಲ್ಲಿ 92 ಕೋಟಿ ರೂ. ಖರ್ಚು ಮಾಡಿ ಕಾವೇರಿ ಆರತಿ ಮಾಡೋದಕ್ಕೆ ನಮ್ಮ ವಿರೋಧ ಇದೆ ಎಂದು ಶಾಸಕ ಟಿ.ಎಸ್.ಶ್ರೀವತ್ಸ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾವೇರಿ ಆರತಿ ಮೂಲಕ ಸರ್ಕಾರ ನಾವು ಹಿಂದುಗಳ ಪರವಾಗಿದ್ದೇವೆ ಎಂದು ತೋರಿಸಲು ಹೊರಟಿದೆ ಎಂದು ಕುಟುಕಿದರು.
ಶಾಸಕರ ಕ್ಷೇತ್ರಗಳಲ್ಲಿ ರಸ್ತೆ ಸರಿಪಡಿಸಲು ಹಣವಿಲ್ಲ. ಒಬ್ಬೊಬ್ಬ ಶಾಸಕರು ಕೇವಲ 1 ಕೋಟಿ ರೂ. ಅನುದಾನಕ್ಕೆ ಕೋರಿದ್ದೇವೆ. ಹೀಗಿರುವಾಗ 92 ಕೋಟಿ ರೂ. ವಿನಿಯೋಗಿಸುವ ಅವಶ್ಯಕತೆ ಇಲ್ಲ. ಕಾವೇರಿ ಆರತಿ ವಿಚಾರದಲ್ಲಿ ಬಿಜೆಪಿಯವರನ್ನು ಸಭೆಗೆ ಕರೆದಿದ್ದರು. ಕಾವೇರಿ ನದಿಯ ಪಕ್ಕದಲ್ಲಿ ಸ್ವಚ್ಛತೆಯ ವ್ಯವಸ್ಥೆ ಮಾಡಿದರೆ ಅದೇ ಆರತಿ ಮಾಡಿದ ಹಾಗೆ. ಕೆಆರ್‌ಎಸ್‌ನಲ್ಲಿ ಕಾವೇರಿ ಆರತಿ ಮಾಡೋದಕ್ಕೆ ನಮ್ಮ ವಿರೋಧವಿದೆ ಎಂದು ಅವರು ಹೇಳಿದರು.
ಅಹಮದಾಬಾದ್‌ನಲ್ಲಿ ಸಂಭವಿಸಿದ ವಿಮಾನ ದುರಂತ ಮನಸ್ಸಿಗೆ ಬಹಳ ನೋವು ನೀಡಿದೆ. ಪ್ರಕರಣ ಕುರಿತು ತನಿಖೆ ನಡೆಸಬಹುದು. ದೇಶದಲ್ಲಿ ಇದೊಂದು ದೊಡ್ಡ ದುರಂತವಾಗಿದೆ. ಅವರ ಕುಟುಂಬದವರು ಹೇಗೆ ನೋವು ತಡೆದುಕೊಳ್ಳುತ್ತಾರೋ ಗೊತ್ತಿಲ್ಲ. ಆ ಎಲ್ಲ ಕುಟುಂಬಗಳಿಗೂ ತಾಯಿ ಚಾಮುಂಡೇಶ್ವರಿ ನೋವನ್ನು ತಡೆದುಕೊಳ್ಳುವ ಶಕ್ತಿ ನೀಡಲಿ ಎಂದರು.
ತುಮಕೂರು ಜಿಲ್ಲೆಯ ಹೆಸರು ಬದಲಿಸುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಶಾಸಕ ಟಿ.ಎಸ್.ಶ್ರೀವತ್ಸ, ತುಮಕೂರಿನ ಸಿದ್ಧಗಂಗಾ ಶ್ರೀಗಳನ್ನು ನಡೆದಾಡುವ ದೇವರು ಎನ್ನುತ್ತಾರೆ. ಅಂಥ ಪುಣ್ಯಸ್ಥಳದ ಹೆಸರು ಬದಲಿಸೋದು ಒಳ್ಳೆಯದಲ್ಲ. ಸರ್ಕಾರ ತುಘಲಕ್ ಮಾದರಿಯಲ್ಲಿ ಅಧಿಕಾರ ನಡೆಸಲು ಮುಂದಾಗಿದೆ ಆಕ್ರೋಶ ವ್ಯಕ್ತಪಡಿಸಿದರು.
ನಮ್ಮ ನಮ್ಮ ಊರುಗಳ ಇತಿಹಾಸ ತಿಳಿದುಕೊಳ್ಳದೆ ಹೆಸರು ಬದಲಿಸೋದು ಒಳ್ಳೆಯದಲ್ಲ. ರಾಮನಗರ ಜಿಲ್ಲೆಯ ಹೆಸರು ಬದಲಾವಣೆ ಮಾಡಿದ ಕಾರಣ ಇನ್ನೂ ತಿಳಿದಿಲ್ಲ. ಈ ಹಿಂದೆ ಅಲ್ಲಿ ಚರ್ಚ್ ನಿರ್ಮಿಸಬೇಕೆಂದು ಡಿ.ಕೆ.ಶಿವಕುಮಾರ್ ಮುಂದಾಗಿದ್ದರು. ಅದಕ್ಕೆ ವಿರೋಧ ವ್ಯಕ್ತವಾಗಿತ್ತು.
ನಾಳೆ ಮಂಡ್ಯ, ಮೈಸೂರಿನ ಹೆಸರನ್ನೂ ಬದಲಾವಣೆ ಮಾಡಬಹುದು. ತುಮಕೂರು ಜಿಲ್ಲೆಯ ಜನತೆ ಹೋರಾಟ ಮಾಡಬೇಕು ಎಂದು ಸಲಹೆ ನೀಡಿದರು.