ಕಾವೇರಿ ನದಿ ತೀರದಲ್ಲಿ ಗಿಡ ನೆಡುವ ಕಾರ್ಯಕ್ಕೆ ಚಾಲನೆ

21Kush01 (1)
ಕುಶಾಲನಗರ ಕಾವೇರಿ ನದಿ ತಟದಲ್ಲಿ ವಿವಿಧ ಸಂಘಟನೆಗಳ ಪ್ರಮುಖರು ಬುಧವಾರ ಗಿಡ ನೆಟ್ಟರು. ವಿ.ಎಸ್.ಆನಂದ್‌ಕುಮಾರ್, ಲೀಲಾವತಿ, ರೋಹಿತ್, ಎಂ.ಎನ್.ಚಂದ್ರಮೋಹನ್, ಪೂರ್ಣಿಮಾ, ರಾಜು ಇತರರಿದ್ದರು.
Published on

ಕುಶಾಲನಗರ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಶೌರ್ಯ, ವಿಪತ್ತು ತಂಡ ಕೊಡಗು ಜಿಲ್ಲಾ ಜನಜಾಗೃತಿ ವೇದಿಕೆ ಆಶ್ರಯದಲ್ಲಿ ಕುಶಾಲನಗರ ಕಾವೇರಿ ನದಿ ತೀರದಲ್ಲಿ ಗಿಡ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಶ್ರೀ ಅಯ್ಯಪ್ಪಸ್ವಾಮಿ ದೇವಾಲಯ ಬಳಿ ಬುಧವಾರ ಆಯೋಜಿಸಿದ್ದ ಸರಳ ಕಾರ್ಯಕ್ರಮದಲ್ಲಿ ಪುರಸಭೆ ಸದಸ್ಯ ವಿ.ಎಸ್.ಆನಂದಕುಮಾರ್ ಅವರು ಚಾಲನೆ ನೀಡಿ ಕಾರ್ಯಕ್ರಮಕ್ಕೆ ಶುಭ ಕೋರಿದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕಿ ಲೀಲಾವತಿ ಮಾತನಾಡಿ, ಕೊಡಗು ಜಿಲ್ಲಾ ಜನಜಾಗೃತಿ ವೇದಿಕೆಯ ಆಶ್ರಯದಲ್ಲಿ ಈ ಸಾಲಿನಲ್ಲಿ ಯೋಜನಾ ವೃತ್ತದ ಒಟ್ಟು ಏಳು ತಾಲೂಕುಗಳಲ್ಲಿ 30 ಸಾವಿರ ಗಿಡಗಳನ್ನು ನೆಡುವ ಗುರಿ ಹೊಂದಲಾಗಿದೆ. ಈ ಸಂಬಂಧ ಕುಶಾಲನಗರ ತಾಲೂಕು ವ್ಯಾಪ್ತಿಯಲ್ಲಿ 2,500 ಗಿಡಗಳನ್ನು ನೆಡುವ ಕೆಲಸಕ್ಕೆ ಚಾಲನೆ ದೊರೆತಿದೆ. ಹೂವು ಹಣ್ಣು ನೆರಳು ನೀಡುವ ಗಿಡಗಳನ್ನು ನೆಡಲಾಗುತ್ತಿದೆ ಎಂದರು.

ಯೋಜನಾಧಿಕಾರಿ ರೋಹಿತ್ ಮಾತನಾಡಿ, ಸೋಮವಾರಪೇಟೆ ಮತ್ತು ಕುಶಾಲನಗರ ತಾಲೂಕು ವ್ಯಾಪ್ತಿಯಲ್ಲಿ 5 ಸಾವಿರ ಗಿಡಗಳನ್ನು ನೆಡುವ ಯೋಜನೆಗೆ ಈಗಾಗಲೇ ಪೂರ್ವಸಿದ್ಧತೆ ನಡೆದಿದೆ. ಯೋಜನೆಯ ಶೌರ್ಯ ವಿಪತ್ತು ತಂಡದ ಸದಸ್ಯರು ಸೇರಿದಂತೆ ಸ್ಥಳೀಯ ವಿವಿಧ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಈ ಯೋಜನೆಯನ್ನು ನಡೆಸಲಾಗುತ್ತಿದೆ ಎಂದರು.

ಜನಜಾಗೃತಿ ವೇದಿಕೆ ಸದಸ್ಯ ಎಂ.ಎನ್.ಚಂದ್ರಮೋಹನ್, ಯೋಜನೆಯ ಕುಶಾಲನಗರ ವಲಯ ಮೇಲ್ವಿಚಾರಕಿ ಪೂರ್ಣಿಮಾ, ಕೃಷಿ ಅಧಿಕಾರಿ ರಾಜು, ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಪಿ.ಕೆ. ಜಗದೀಶ್, ಕಾವೇರಿ ರಿವರ್ ಸೇವಾ ಟ್ರಸ್ಟ್‌ನ ಉಪಾಧ್ಯಕ್ಷ ಡಿ.ಆರ್. ಸೋಮಶೇಖರ್, ಒಕ್ಕೂಟದ ಅಧ್ಯಕ್ಷರು, ಸೇವಾ ಪ್ರತಿನಿಧಿಗಳು, ಶೌರ್ಯ ವಿಪತ್ತು ತಂಡದ ಕಾರ್ಯಕರ್ತರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net