ಕಾವೇರಿ ಜಾಗೃತಿ ರಥಯಾತ್ರೆಗೆ ಸ್ವಾಗತ

IMG-20241023-WA0075
ಪಟ್ಟಣದ ಶಾಶ್ವತಿ ಧಾರ್ಮಿಕ ಕೇಂದ್ರಕ್ಕೆ ಮಂಗಳವಾರ ಗಂಜಾಂನ ಶಂಕರ ಮಠದ ನೇತೃತ್ವದಲ್ಲಿ ತಲಕಾವೇರಿಯಿಂದ ತಮಿಳುನಾಡಿನ ಪೊಂಪುಹಾರ್ ವರೆಗೆ ವಿವಿಧ ರಾಜ್ಯದ ಸನ್ಯಾಸಿಗಳ ತಂಡದೊಂದಿಗೆ ತೆರಳಲಿರುವ ಕಾವೇರಿ ರಥಕ್ಕೆ ಜ್ಯೋತಿಷಿ ಡಾ.ಭಾನುಪ್ರಕಾಶ್ ಶರ್ಮ ಜ್ಯೋತಿಬೆಳಗಿ ಪೂಜೆ ಸಲ್ಲಿಸಿದರು.
Published on

ಶ್ರೀರಂಗಪಟ್ಟಣ: ಜೀವನದಿ ಕಾವೇರಿ ಉಳಿವಿಗೆ ಸಾಧು-ಸಂತರ ಸಂಘಗಳ ವತಿಯಿಂದ ತಲಕಾವೇರಿಯಿಂದ ತಮಿಳುನಾಡಿನ ಪೊಂಪೂಹಾರ್‌ವರೆಗೂ 14 ದಿನಗಳ ಕಾಲ ಹಮ್ಮಿಕೊಂಡಿರುವ 14ನೇ ವರ್ಷದ ಕಾವೇರಿ ಜಾಗೃತಿ ರಥಯಾತ್ರೆಗೆ ಪಟ್ಟಣದಲ್ಲಿ ಜ್ಯೋತಿಷಿ ಡಾ.ಭಾನುಪ್ರಕಾಶ್ ಶರ್ಮ ಜ್ಯೋತಿ ಬೆಳಗಿ ಪೂಜಿಸಿದರು.

ಪಟ್ಟಣದ ಶಾಶ್ವತಿ ಧಾರ್ಮಿಕ ಕೇಂದ್ರಕ್ಕೆ ಮಂಗಳವಾರ ಗಂಜಾಂನ ಶಂಕರ ಮಠದ ನೇತೃತ್ವದಲ್ಲಿ ಅಖಿಲ ಭಾರತೀಯ ಸನ್ಯಾಸಿ ಸಂಘ, ಕಾವೇರಿ ಸ್ವಚ್ಛತಾ ಆಂದೋಲನ ಸಮಿತಿ, ಕಾವೇರಿ ರಿವರ್ ವಾಟರ್ ಪ್ರೊಟೆಕ್ಷನ್ ಟ್ರಸ್ಟ್ ಹಾಗೂ ಕಾವೇರಿ ರಿವರ್ ಸೇವಾ ಸಮಿತಿಯೊಂದಿಗೆ ಮಾತೆ ಕಾವೇರಿ ಮೂರ್ತಿಯ ರಥ ಯಾತ್ರೆಗೆ ಪೂಜೆ ಸಲ್ಲಿಸಿ, ಜಾಗೃತಿ ಕಾರ್ಯದ ಯಶಸ್ಸಿಗೆ ಶುಭಕೋರಿ ಮಾತನಾಡಿದರು.

ಭಾರತೀಯರಿಂದ ದೇವನದಿ ಎಂದು ಕರೆಸಿಕೊಳ್ಳುವ ಗಂಗೆಯ ಪಾಪವನ್ನೇ ತೊಳೆದವಳು ನಮ್ಮ ಜೀವನದಿ ಪವಿತ್ರ ಕಾವೇರಿ. ಇಂತಹ ಕಾವೇರಿ ಆಧುನಿಕ ಯುಗದ ಕೈಗಾರಿಕೆ, ಚರಂಡಿಗಳು, ಹೋಟೆಲ್ ತ್ಯಾಜ್ಯಗಳು ಸೇರಿದಂತೆ ಮಾನವನ ದುರಾಸೆಗಳಿಂದ ಸಾಕಷ್ಟು ರೀತಿಗಳಲ್ಲಿ ಮಾಲಿನ್ಯಗೊಳ್ಳುವ ಜತೆಗೆ ಅತಿಕ್ರಮಕ್ಕೂ ಒಳಗಾಗಿದ್ದಾಳೆ. ನಮ್ಮ ಪರಿಸರ ರಕ್ಷಣೆ ಹಾಗೂ ಜೀವಸಂಕುಲಗಳ ಉಳಿವಿಗೆ ನಮ್ಮ ಕಾವೇರಿ ಉಳಿಸಿಕೊಳ್ಳುವ ಅಗತ್ಯತೆ ಪ್ರತಿಯೊಬ್ಬರ ಕರ್ತವ್ಯ. ಈ ನಿಟ್ಟಿನಲ್ಲಿ ಗಂಜಾಂನ ಶಂಕರ ಮಠದ ಗಣೇಶಗಿರಿ ಸ್ವರೂಪಾನಂದ ಸ್ವಾಮಿ ಹಾಗೂ ಅಖಿಲ ಭಾರತ ಸನ್ಯಾಸಿ ಸಂಘದ ರಮಾನಂದ ಸ್ವಾಮಿ ನಿರ್ದೇಶನದಲ್ಲಿ ಕಾವೇರಿ ನದಿಯ ಹರಿವಿನ ಉದ್ದಕ್ಕೂ ನಮ್ಮ ಅಸಂಖ್ಯಾತ ಸಾಧು-ಸಂತರು ಸತತ ಪ್ರಯತ್ನದಲ್ಲಿದ್ದು, ನಿರಂತರ ಜಾಗೃತಿ ನಡೆಸಿ ಜನರು ಕಾರ್ಯ ನಿರ್ವಹಿಸುತ್ತಿರುವುದು ಶ್ಲಾಘನೀಯ ಎಂದರು.

ವೇದಬ್ರಹ್ಮ ಲಕ್ಷ್ಮೀಶ ಶರ್ಮ, ಆದಿತ್ಯನಾಂದ, ಗೋರೂಕನಾಂದ, ಅಣ್ಣಮಲೈನ ಜ್ಞಾನ ದೇಶಿಕಾ ಸ್ವಾಮಿ, ಯೋಗಿನಿ ವಿದ್ಯಾಂಬ ಸರಸ್ವತಿ, ಕಾಳೀಶ್ವರನಾನಂದ ಸ್ವಾಮಿ ಸೇರಿದಂತೆ ಹಲವು ರಾಜ್ಯಗಳ ಸ್ವಾಮೀಜಿಗಳ ತಂಡವು ಈ ವೇಳೆ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net