

ಗೋಣಿಕೊಪ್ಪ : ಕಾವೇರಿ ಕಾಲೇಜು ವತಿಯಿಂದ ಮಹಾದಂಡ ನಾಯಕ ಫೀಲ್ಡ್ ಮಾರ್ಷಲ್ ಕೆ. ಎಂ. ಕಾರ್ಯಪ್ಪ ಅವರ 124 ನೇ ಜನ್ಮದಿನದ ಅಂಗವಾಗಿ ಕಾಲೇಜು ಆವರಣದಲ್ಲಿರುವ ಕೆ.ಎಂ. ಕಾರ್ಯಪ್ಪ, ಜನರಲ್ ಕೊಡಂದೇರ ಎಸ್.ತಿಮ್ಮಯ್ಯ ಪ್ರತಿಮೆಗೆ ಪುಷ್ಪಾರ್ಚನೆ ಸಲ್ಲಿಸಲಾಯಿತು.
ಹಿರಿಯ ವೈದ್ಯ ಡಾ.ಕಾಳಿಮಾಡ ಕೆ.ಶಿವಪ್ಪ ಮಾತನಾಡಿ, ಭಾರತದ ಮೊದಲ ಜನರಲ್ ಮತ್ತು ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಅವರ ಹೆಸರು ಕೇಳಿದರೆ ರೋಮಾಂಚನವಾಗುತ್ತದೆ. ಕೊಡಗಿನ ಪ್ರತಿಮನೆಯಲ್ಲೂ ಒಬ್ಬ ಯೋಧ ಹುಟ್ಟುತ್ತಾನೆ ಎಂಬ ನಂಬಿಕೆ ಇದ್ದು, ಪುಟ್ಟ ಜಿಲ್ಲೆಯಾದರೂ ದೇಶಕ್ಕೆ ಕೊಡಗಿನ ಕೊಡುಗೆ ಅನನ್ಯ. ರಕ್ಷಣಾ ಕ್ಷೇತ್ರಕ್ಕೆ ನೀಡಿರುವ ಸಾವಿರಾರು ಯೋಧರು ದೇಶಕ್ಕೆ ಹೆಮ್ಮೆ ಎಂದರು.
ಪದವಿ ಕಾಲೇಜು ಪ್ರಾಂಶುಪಾಲ ಡಾ.ಮಾಳೇಟೀರ ಬಿ.ಕಾವೇರಪ್ಪ ಮಾತನಾಡಿ, ಜಗತ್ತಿಗೆ ಭಾರತೀಯರ ಶೌರ್ಯವನ್ನು ಪರಿಚಯಿಸಿದ ಕೀರ್ತೀ ಕೆ.ಎಂ. ಕಾರ್ಯಪ್ಪ ಅವರಿಗೆ ಸಲ್ಲುತ್ತದೆ. ಸ್ವಾತಂತ್ರ್ಯ ನಂತರ ದೇಶಕ್ಕೆ ಬಲಿಷ್ಠ ಸೇನೆಯನ್ನು ಕಟ್ಟಿದ ಇವರು ವಿಶ್ವಕ್ಕೆ ಮಾದರಿ ಎಂದರು.
ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಸಣ್ಣುವಂಡ ಎಸ್.ಮಾದಯ್ಯ, ಎನ್.ಸಿ.ಸಿ. ಅಧಿಕಾರಿಗಳಾದ ಲೆಫ್ಟಿನೆಂಟ್ ಐ.ಡಿ. ಲೇಪಾಕ್ಷಿ, ಲೆ.ಎಂ.ಆರ್.ಅಕ್ರಂ, ಎನ್‌ಎಸ್‌ಎಸ್ ಅಧಿಕಾರಿ ಮಂದೇಯಂಡ ವನಿತ್‌ಕುಮಾರ್ ಇದ್ದರು.