

ಗೋಣಿಕೊಪ್ಪಲು: ಹಾಕಿ ಮಾಂತ್ರಿಕ ಮೇಜರ್ ಧ್ಯಾನ್‌ಚಂದ್ ಅವರ ಜನ್ಮದಿನದ ಅಂಗವಾಗಿ, ಗೋಣಿಕೊಪ್ಪಲು ಕಾವೇರಿ ಕಾಲೇಜಿನಲ್ಲಿ ರಾಷ್ಟ್ರೀಯ ಕ್ರೀಡಾ ದಿನ ಆಚರಿಸಲಾಯಿತು.
ಕಾವೇರಿ ಕಾಲೇಜು ಪ್ರಾಂಶುಪಾಲ ಡಾ.ಎಂ.ಬಿ.ಕಾವೇರಿಯಪ್ಪ ಮೇಜರ್ ಧ್ಯಾನ್ ಚಂದ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಅಪ್ರತಿಮ ದೇಶ ಭಕ್ತರಾಗಿದ್ದ ಧ್ಯಾನ್‌ಚಂದ್ ಸ್ವಾತಂತ್ರ್ಯ ಪೂರ್ವದಲ್ಲೇ ಭಾರತಕ್ಕೆ ಮೂರು ಒಲಿಂಪಿಕ್ಸ್ ಚಿನ್ನದ ಪದಕವನ್ನು ಗೆದ್ದುಕೊಟ್ಟಿದ್ದ ಮಹಾನ್ ಚೇತನ. ವಿಶ್ವ ಕಂಡ ಅತ್ಯುತ್ತಮ ಹಾಕಿ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದ ಅವರು ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾ ಭೂಪಟದಲ್ಲಿ ಮೊದಲ ಬಾರಿಗೆ ಭಾರತ ಮಿನುಗುವಂತೆ ಮಾಡಿದ್ದರು ಎಂದರು.
ಧ್ಯಾನ್‌ಚಂದ್ ತಮ್ಮ ವೃತ್ತಿ ಜೀವನದಲ್ಲಿ ಒಟ್ಟು 185 ಪಂದ್ಯಗಳನ್ನು ಆಡಿದ್ದು, ಹಾಕಿಯಲ್ಲಿ ಎಷ್ಟು ಸಮರ್ಪಿತರಾಗಿದ್ದರೂ ಎಂದರೆ ಅವರು ಬೆಳದಿಂಗಳ ರಾತ್ರಿಯಲ್ಲಿ ಹಾಕಿ ಆಟವನ್ನು ಅಭ್ಯಾಸ ಮಾಡುತ್ತಿದ್ದರು. ಚಂದ್ರನ ಬೆಳಕಿನಲ್ಲಿ ಆಟ ಆಡುತಿದ್ದ ಕಾರಣ ಅವರಿಗೆ ಧ್ಯಾನ್‌ಚಂದ್ ಎಂಬ ಹೆಸರು ಬಂದಿತು.
ರಾಷ್ಟ್ರೀಯ ಕ್ರೀಡಾ ದಿನ ಆಚರಣೆ ಮುಖ್ಯ ಉದ್ದೇಶ ಕ್ರೀಡೆಯ ಮಹತ್ವದ ಬಗ್ಗೆ ಜನರಲ್ಲಿ ಜಾಗೃತಿಯನ್ನುಂಟು ಮಾಡುವುದಾಗಿದೆ. ಅದರ ಜತೆಗೆ ದೈನಂದಿನ ಜೀವನದಲ್ಲಿ ದೈಹಿಕವಾಗಿ ಸಕ್ರಿಯವಾಗಿರುವಂತೆ ಪ್ರೇರೇಪಿಸುವುದು ಕೂಡ ಇದರ ಗುರಿಯಾಗಿದೆ. ಯುವ ಜನಾಂಗ ಬಿಡುವಿನ ವೇಳೆಯಲ್ಲಿ ಯಾವುದಾದರು ಒಂದು ಕ್ರೀಡೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವುದರಿಂದ ದುರಭ್ಯಾಸಗಳಿಂದ ದೂರ ಉಳಿಯಲು ಸಹಕಾರಿಯಾಗುತ್ತದೆ ಎಂದರು.
ಉಪ ಪ್ರಾಂಶುಪಾಲೆ ಪ್ರೊ.ಎಂ.ಎಸ್. ಭಾರತಿ, ಐ.ಕ್ಯೂ.ಎ.ಸಿ. ಸಂಚಾಲಕಿ ಡಾ. ನಯನ ತಮ್ಮಯ್ಯ, ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಸಂಘದ ಸಂಚಾಲಕಿ ಡಾ.ಪಿ ಪಿ. ಸವಿತಾ, ದೈಹಿಕ ಶಿಕ್ಷಣ ನಿರ್ದೇಶಕ ಎಂ.ಟಿ. ಸಂತೋಷ್, ಹಾಕಿ ತರಬೇತುದಾರ ಮಿನ್ನಂಡ ಜೋಯಪ್ಪ, ಉಪನ್ಯಾಸಕರು, ಆಡಳಿತಾತ್ಮಕ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಇದ್ದರು.