ಕಾವೇರಿ 2.0 ತಂತ್ರಾಂಶದ ಬಗ್ಗೆ ಉಚಿತ ಜಾಗೃತಿ ಶಿಬಿರ

Published on

ಮೈಸೂರು: ಆಸ್ತಿ ನೋಂದಣಿಗಾಗಿ ಮುದ್ರಾಂಕ ಮತ್ತು ನೋಂದಣಿ ಇಲಾಖೆ ಅನುಷ್ಠಾನಗೊಳಿಸಲಿರುವ ಕಾವೇರಿ 2.0 ತಂತ್ರಾಂಶದ ಬಗ್ಗೆ ಮಾಹಿತಿ ನೀಡಲು ಏ.14ರಂದು ಒಂದು ದಿನದ ಉಚಿತ ಜಾಗೃತಿ ಶಿಬಿರ ಆಯೋಜಿಸಲಾಗಿದೆ.
ವಿಶ್ವೇಶ್ವರನಗರ ಅಕ್ಕಮಹಾದೇವಿ ರಸ್ತೆಯಲ್ಲಿರುವ ಬಿಲ್ಡರ್ಸ್‌ ಅಸೋಸಿಯೇಷನ್(ಎಂಬಿಸಿಟಿ) ಸಭಾಂಗಣದಲ್ಲಿ ಶಿಬಿರ ನಡೆಯಲಿದ್ದು, ಆಸ್ತಿ ನೋಂದಣಿ ಕಾರ್ಯಗಳಲ್ಲಿ ನಿರತರಾದ ಬಿಲ್ಡರ್, ಡೆವಲಪರ್, ವಕೀಲರು, ಪತ್ರ ಬರಹಗಾರರು ಸೇರಿದಂತೆ ಸಾರ್ವಜನಿಕರು ಭಾಗವಹಿಸಬಹುದು ಎಂದು ಕ್ರಡಾಯ್ ಮೈಸೂರು ಶಾಖೆ ಅಧ್ಯಕ್ಷ ಶ್ರೀಹರಿ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಬಿಎಐ, ಕ್ರೆಡೈ ಹಾಗೂ ಯೂತ್‌ವಿಂಗ್ ಸಹಯೋಗದಲ್ಲಿ ಈ ಶಿಬಿರ ಆಯೋಜಿಸಲಾಗಿದೆ. ಮುದ್ರಾಂಕ ಮತ್ತು ನೋಂದಣಿ ಇಲಾಖೆ ಅಧಿಕಾರಿಗಳು ಈ ಬಗ್ಗೆ ಮಾಹಿತಿ ನೀಡಲಿದ್ದಾರೆ. ಮುದ್ರಾಂಕ ಮತ್ತು ನೋಂದಣಿ ಇಲಾಖೆಯ ಪ್ರಧಾನ ನಿರೀಕ್ಷಕರಾದ ಡಾ.ಬಿ.ಆರ್.ಮಮತಾ, ಸಹಾಯಕ ನಿರೀಕ್ಷಕರಾದ ಎಚ್.ಎಲ್.ಪ್ರಭಾಕರ್ ಸೇರಿದಂತೆ ಇತರರು ಭಾಗವಹಿಸಿ ಸಂವಾದ ನಡೆಸಲಿದ್ದಾರೆ ಎಂದು ತಿಳಿಸಿದರು.
ಈ ಹಿಂದಿನ ತಂತ್ರಾಂಶದಲ್ಲಿ ಲೋಪಗಳಿದ್ದ ಕಾರಣ ಅದನ್ನು ಅಭಿವೃದ್ಧಿಪಡಿಸಿ ಕಾವೇರಿ 2.0 ಎಂಬ ತಂತ್ರಾಂಶ ಬಿಡುಗಡೆಗೊಳಿಸಲಾಗಿದೆ. ಇದು ಜಿಲ್ಲೆಯಲ್ಲಿಯೂ ಜಾರಿಯಾಗಲಿದ್ದು, ಎಲ್ಲವೂ ಆನ್‌ಲೈನ್‌ನಲ್ಲಿಯೇ ನೋಂದಣಿ ಕಾರ್ಯ ಕೇವಲ 10ರಿಂದ 15 ನಿಮಿಷದಲ್ಲಿ ಪೂರ್ಣಗೊಳ್ಳಲಿದೆ. ಇದರ ಬಗ್ಗೆ ತಿಳಿದುಕೊಳ್ಳಲು ಈ ಜಾಗೃತಿ ಶಿಬಿರ ಅವಕಾಶ ಮಾಡಿಕೊಡಲಿದ್ದು, ಸ್ಥಳದಲ್ಲಿಯೇ ನೋಂದಣಿಗೆ ಅವಕಾಶವಿದೆ ಎಂದು ತಿಳಿಸಿದರು.
ಬಿಎಐ ಅಧ್ಯಕ್ಷ ನಾಗರಾಜ್ ಭೈರಿ, ಮಾಜಿ ಅಧ್ಯಕ್ಷ ಮುರಳೀಧರ್, ಬಿಐಎ ಕಾರ್ಯದರ್ಶಿ ಬಾಲಾಜಿ, ಕ್ರಡಾಯ್ ಮೈಸೂರು ಶಾಖೆ ಕಾರ್ಯದರ್ಶಿ ಎಲ್.ಅರುಣ್ ಪಂಡಿತ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net