

ಅಥಣಿ: ಬಸವ ತತ್ವವನ್ನು ಮೈಗೂಡಿಸಿಕೊಂಡು ನಾಡಿಗೆ ಬೆಳಕಾಗಿ, ಕಾವಿ ಕುಲಕ್ಕೆ ಘನತೆ ತಂದ ಜಗದ್ಗುರು ಪೀಠಕ್ಕೆ ಗುರುಪೀಠವಾಗಿರುವುದು ಅಥಣಿ ಗಚ್ಚಿನಮಠ ಎಂದು ಶಿವಬಸವ ಸ್ವಾಮೀಜಿ ಹೇಳಿದರು.
ತಾಲೂಕಿನ ಗಚ್ಚಿನಮಠದ ೧೦೪ನೇ ಜಾತ್ರಾ ಮಹೋತ್ಸವ ಅಂಗವಾಗಿ ಈಚೆಗೆ ಮುರುಘೇಂದ್ರ ಶಿವಯೋಗಿಗಳ ರಥೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿ, ಮಹಾತಪಸ್ವಿ ಮುರುಘೇಂದ್ರ ಶಿವಯೋಗಿಗಳಂತೆ ನಾಡಿನಲ್ಲಿ ಸಾಧಕರು ಬಂದಾಗ ನಾಡು ಕಲ್ಯಾಣ ರಾಜ್ಯವಾಗಿ ಕಂಗೊಳಿಸುತ್ತದೆ. ಧಾರ್ಮಿಕ ಆಚರಣೆಗಳು ನಮ್ಮ ಭಾವನೆ ಮತ್ತು ಮನಸ್ಸನ್ನು ಅರಳಿಸಿ ಸನ್ಮಾರ್ಗದತ್ತ ಸಾಗಲು ಸಹಕಾರಿಯಾಗಿದೆ. ಮುರುಘೇಂದ್ರ ಶಿವಯೋಗಿಗಳ ಕೃಪಾಶೀರ್ವಾದಕ್ಕೆ ಪಾತ್ರರಾಗಿ, ಕಾಯಕಜೀವಿಗಳಾಗಿ ಬದುಕುತ್ತಿರುವುದು ಹೆಮ್ಮೆಯ ಸಂಗತಿ ಎಂದರು.
ಹಾವೇರಿಯ ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ, ಶೇಗುಣಿಸಿ ಡಾ.ಮಹಾಂತ ಪ್ರಭು ಸ್ವಾಮೀಜಿ ಮಾತನಾಡಿ ದಿವ್ಯಶಕ್ತಿಯ ಭವ್ಯ ಪರಂಪರೆ ಹೊಂದಿರುವ ಗಚ್ಚಿನಮಠ ನಾಡಿಗೆ ಮಾದರಿಯಾಗಿದೆ ಸಾಕ್ಷಾತ ಶಿವ ಸ್ವರೂಪಿಗಳಾಗಿರುವ ಮುರುಘೇಂದ್ರ ಶಿವಯೋಗಿಗಳು ನಮಗೆಲ್ಲ ನಿತ್ಯ ಸ್ಮರಣೀಯರಾಗಿದ್ದಾರೆ ಎಂದು ತಿಳಿಸಿದರು.
ರಥೋತ್ಸವ ಸಾಗುವ ಬೀದಿಯಲ್ಲಿ ರಂಗೋಲಿ, ವಿದ್ಯುತ್ ದೀಪಗಳು ಹಾಗೂ ತಳಿರು-ತೋರಣಗಳಿಂದ ಅಲಂಕರಿಸಿ ವಿವಿಧ ವಾದ್ಯ ಮೇಳಗಳೊಂದಿಗೆ ಸಾಗಿತು. ಆನೆಯಿಂದ ರಥೋತ್ಸವಕ್ಕೆ ಮಾಲೆ ರಥಕ್ಕೆ ನಮಸ್ಕಾರ ಸಲ್ಲಿಸಿದ್ದು ವಿಶೇಷವಾಗಿತ್ತು.
ಘಟಪ್ರಭಾದ ಕೆಂಪಯ್ಯ ಸ್ವಾಮಿಮಠದ ಡಾ.ಮಲ್ಲಿಕಾರ್ಜುನ ಸ್ವಾಮೀಜಿ, ಸಿದ್ದಬಸವ ಕಬೀರ ಸ್ವಾಮೀಜಿ, ಸಿದ್ದಲಿಂಗ ಸ್ವಾಮೀಜಿ, ಮರುಳಸಿದ್ಧ ಸ್ವಾಮೀಜಿ, ಗುರುಸಿದ್ಧ ಸ್ವಾಮೀಜಿ, ಮಲ್ಲಿಕಾರ್ಜುನ ಸ್ವಾಮೀಜಿ, ವಿರೇಶ್ವರ ದೇವರು, ಬಾಬುರಾವ ಮಹಾರಾಜರು, ಯುವ ಮುಖಂಡ ಚಿದಾನಂದ ಸವದಿ, ಶಶಿಕಾಂತ ಪಡಸಲಗಿ ಇತರರಿದ್ದರು.