

ಮೈಸೂರು: ಚಾಮುಂಡಿಬೆಟ್ಟದಲ್ಲಿ ಬೆಂಕಿ ನಂದಿಸಲು ಅಗ್ನಿಶಾಮಕ ಸಿಬ್ಬಂದಿಗೆ ನೀರು ಕೊಡದ ಮಾಲ್ ಆಫ್ ಮೈಸೂರು ಆಡಳಿತ ಮಂಡಳಿಗೆ ಜಿಲ್ಲಾಡಳಿತ ನೋಟಿಸ್ ಜಾರಿ ಮಾಡಿದ್ದು, ಮೂರು ದಿನಗಳ ಒಳಗೆ ಲಿಖಿತ ಉತ್ತರ ನೀಡುವಂತೆ ಸೂಚಿಸಿದೆ.
ಫೆ.21ರಂದು ಚಾಮುಂಡಿಬೆಟ್ಟದಲ್ಲಿ ಕಾಳ್ಗಿಚ್ಚು ನಂದಿಸಲು ಅಪರ ಜಿಲ್ಲಾಧಿಕಾರಿ ಅವರು ನೀರು ಕೊಡುವಂತೆ ಸೂಚನೆ ನೀಡಿದ್ದರೂ ನಿರಾಕರಿಸಿದ್ದು, ಚಾಮುಂಡಿಬೆಟ್ಟದ ಅರಣ್ಯ ಪ್ರದೇಶದಲ್ಲಿ ಹರಡಿದ್ದ ಬೆಂಕಿ ನಂದಿಸುವ ಕಾರ್ಯ ವಿಳಂಬವಾಗಿರುತ್ತದೆ.
ವಿಪತ್ತಿನ ಸಂದರ್ಭಗಳಲ್ಲಿ ತುರ್ತು ರಕ್ಷಣಾ ಕಾರ್ಯಾಚರಣೆ ಕೈಗೊಳ್ಳಲು ವ್ಯಕ್ತಿ ಬಳಿ ಲಭ್ಯವಿರುವ ಸಂಪನ್ಮೂಲಗಳನ್ನು ಪಡೆದುಕೊಳ್ಳಲು ಅವಕಾಶವಿದೆ.
ಈ ಕುರಿತು ನಿರ್ದೇಶನವಿದ್ದರೂ ಅಗ್ನಿಶಾಮಕ ವಾಹನಗಳಿಗೆ ನೀರನ್ನು ಒದಗಿಸದೇ ಇರುವುದಕ್ಕೆ ವಿಪತ್ತು ನಿರ್ವಹಣಾ ಕಾಯಿದೆಯಡಿ ಏಕೆ ಅಗತ್ಯ ಕ್ರಮ ಜರುಗಿಸಬಾರದು ಎಂದು ಪ್ರಶ್ನಿಸಲಾಗಿದೆ.
ಇದಕ್ಕೆ ಸಮಜಾಯಿಷಿ ನೀಡದಿದ್ದರೆ ವಿಪತ್ತು ನಿರ್ವಹಣಾ ಕಾಯಿದೆಯಡಿ ಮುಂದಿನ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರೂ ಆದ ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ ರೆಡ್ಡಿ ತಿಳಿಸಿದ್ದಾರೆ.