ಕಾಳ್ಗಿಚ್ಚು ತಡೆಗೆ ಡ್ರೋನ್ ಮೊರೆ

07-GPT-1
ಅರಣ್ಯ ಇಲಾಖೆಯ ಸಿಬ್ಬಂದಿ ಬಂಡೀಪುರದಿಂದ ಕೆಕ್ಕನಹಳ್ಳ ರಸ್ತೆಯ ಬದಿಯಲ್ಲಿ ಹುಲ್ಲುಸುಡುವ ಕಾರ್ಯದಲ್ಲಿ ತೊಡಗಿದ್ದಾರೆ. ಬಂಡೀಪುರವನ್ನು ಸುತ್ತುಹಾಕುತ್ತಿರುವ ಅರಣ್ಯ ಇಲಾಖೆಯ ಡ್ರೋನ್ ಬಂಡೀಪುರವನ್ನು ಡ್ರೋನ್ ಕಣ್ಗಾಲಿನಲ್ಲಿ ರಕ್ಷಿಸುವ ವಿಧಾನಗಳ ಬಗ್ಗೆ ಡಾ.ರಮೇಶ್ ಕುಮಾರ್ ಅಧಿಕಾರಿಗಳಿಗೆ ಸೂಚನೆ ನೀಡುತ್ತಿದ್ದಾರೆ.
Published on

ಗುಂಡ್ಲುಪೇಟೆ: ಬಂಡೀಪುರವನ್ನು ಬೆಂಕಿಯಿಂದ ರಕ್ಷಿಸಲು ಅರಣ್ಯ ಇಲಾಖೆ ಡ್ರೋನ್ ಮೊರೆ ಹೋಗಿದೆಯಲ್ಲದೇ, ಸಿಬ್ಬಂದಿಯನ್ನು ಬಳಸಿಕೊಂಡು ರಸ್ತೆ ಬದಿಗಳಲ್ಲಿ ಹುಲ್ಲು ಸುಡುವ ಕಾರ್ಯ ಆರಂಭಿಸಿದೆ.

ಈ ಬಾರಿ ಹೆಚ್ಚಿನ ಮಳೆಬಿದ್ದ ಪರಿಣಾಮ ಅರಣ್ಯ ಪ್ರದೇಶದಲ್ಲಿ ಮರಗಿಡಗಳು ಹಸಿರಾಗಿವೆ. ಆದರೂ ಅರಣ್ಯ ಇಲಾಖೆ ಬೆಂಕಿ ಆಕಸ್ಮಿಕದ ಬಗ್ಗೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದೆ. ಈಗಾಗಲೇ ಎಲ್ಲ 13 ವಲಯಗಳಲ್ಲಿಯೂ ಫೈರ್‌ಲೈನ್ ನಿರ್ಮಿಸಿದ್ದರೂ ಹುಲ್ಲು, ಗರಿಕೆ ಇನ್ನೂ ಪೂರ್ಣಪ್ರಮಾಣದಲ್ಲಿ ಒಣಗದ ಪರಿಣಾಮ ಬೆಂಕಿಯಿಂದ ಸುಡಲಾಗಿಲ್ಲ. ಆದರೆ, ರಸ್ತೆ ಬದಿಗಳಲ್ಲಿ ವ್ಯೆ ಲೈನ್ ನಿರ್ಮಾಣ ಕಾರ್ಯ ಹಾಗೂ ಡ್ರೋನ್ ಕ್ಯಾಮರಾ ಕಣ್ಗಾವಲು ಆರಂಭಿಸಲಾಗಿದೆ.

ಬಂಡೀಪುರ ಹುಲಿ ಯೋಜನೆಯ ಅರಣ್ಯ ಪ್ರದೇಶದಲ್ಲಿ ತಮಿಳುನಾಡು ಹಾಗೂ ಕೇರಳವನ್ನು ಸಂಪರ್ಕಿಸುವ ಎರಡು ರಾಷ್ಟ್ರೀಯ ಹೆದ್ದಾರಿಗಳು ಹಾದುಹೋಗಿದ್ದು ಇಲ್ಲಿ ಪ್ರತಿದಿನವೂ ಸಾವಿರಾರು ವಾಹನಗಳು ಸಂಚರಿಸುತ್ತವೆ. ಸದ್ಯ ಬಿಸಿಲಿಗೆ ಅರಣ್ಯದ ಗರಿಕೆಗಳು ಒಣಗುತ್ತಿರುವುದರಿಂದ ಅರಣ್ಯಕ್ಕೆ ಬೆಂಕಿ ಬೀಳುವ ಅಪಾಯವಿದೆ. ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಸದ್ಯ ಮೇಲುಕಾಮನಹಳ್ಳಿಯಿಂದ ಕೆಕ್ಕನಹಳ್ಳದವರೆಗೆ ರಸ್ತೆ ಬದಿಗಳಲ್ಲಿ ಅರಣ್ಯ ಸಿಬ್ಬಂದಿ ಬಂಬಿನಿಂದ ಹುಲ್ಲು ಸುಡುವ ಕಾರ್ಯ ಆರಂಭಿಸಿದೆ.

ಫೈರ್ ಲೈನ್ ನಿರ್ಮಾಣ: ಈಗಾಗಲೇ ಎಲ್ಲ 13 ವಲಯಗಳಲ್ಲಿ 2450 ಕಿಮೀ ಉದ್ದಕ್ಕೂ ಲಂಟಾನ ಮುಂತಾದ ಕಳೆಗಳನ್ನು ತೆಗೆದು ಫೈರ್‌ಲೈನ್ ನಿರ್ಮಾಣ ಮಾಡಲಾಗಿದೆ. ಸದ್ಯ ವ್ಯೆಲೈನ್ ನಿರ್ಮಾಣ ಮಾಡಲಾಗುತ್ತಿದ್ದು ಮುಂದಿನ 10 ದಿನಗಳ ಕಾಲ ಸುಡುವ ಕಾರ್ಯಕ್ರಮ ಹಾಕಿಕೊಂಡಿದೆ.

2018ರಲ್ಲಿ ಬಂಡೀಪುರಕ್ಕೆ ಬೆಂಕಿಬಿದ್ದು ಭಾರಿ ಅನಾಹುತ ಸಂಭವಿಸಿದ ನಂತರ ಸ್ಯಾಟಲೈಟ್ ನೆರವಿನಿಂದ ಅರಣ್ಯಪ್ರದೇಶವನ್ನು ಗಮನಿಸಲಾಗುತ್ತಿದೆ. ಅಕಸ್ಮಾತ್ ಯಾವುದೇ ಪ್ರದೇಶದಲ್ಲಿ ಬೆಂಕಿ ಕಾಣಿಸಿಕೊಂಡರೆ ಕಂಟ್ರೋಲ್ ರೂಂಗೆ ಎಚ್ಚರಿಕೆ ಕರೆ ಬರುವಂತೆ ಮುನ್ನೆಚ್ಚರಿಕೆ ಕೈಗೊಂಡಿದೆ. ಕಾಡಂಚಿನಲ್ಲಿ ಡ್ರೋನ್ ಕಣ್ಗಾವಲು ನಡೆಸಲಾಗುತ್ತದೆ. ಬಿಸಿಲಿನ ಝಳ ಹೆಚ್ಚಿದಂತೆ ಹಗಲು-ರಾತ್ರಿ ಗಸ್ತು ನಡೆಸಲಾಗುವುದು ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net