

ಶನಿವಾರಸಂತೆ: ಕೊಡಗು, ಮೈಸೂರು ಜಿಲ್ಲೆಯ ಕೆಲವು ಕಡೆಗಳಲ್ಲಿ ಕಾಳ್ಗಿಚ್ಚು ಸಂಭವಿಸುತ್ತಿರುವ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯವರು ಎಚ್ಚರಿಕೆ ಕ್ರಮ ವಹಿಸುವಂತೆ ಹೋಬಳಿ ವ್ಯಾಪ್ತಿಯ ರೈತರು ಅರಣ್ಯ ವಲಯಾಧಿಕಾರಿಗೆ ಮನವಿ ಪತ್ರ ನೀಡಿದರು.
ಬೇಸಿಗೆ ಸಮಯದಲ್ಲಿ ಅರಣ್ಯಕ್ಕೆ ಕಾಳ್ಗಿಚ್ಚು ಸಂಭವಿಸಿ ಅರಣ್ಯ ನಾಶವಾಗುವುದರ ಜತೆಯಲ್ಲಿ ಅರಣ್ಯ ಜೀವಿಗಳು ಬೆಂಕಿಗೆ ಆಹುತಿಯಾಗುತ್ತವೆ. ಅರಣ್ಯದಂಚಿನ ರೈತರ ತೋಟ, ಹೊಲಗಳಿಗೆ ಕಾಳ್ಗಿಚ್ಚು ಹರಡಿ ಬೆಳೆ ನಷ್ಟವಾಗುವ ಸಾಧ್ಯತೆ ಇರುತ್ತದೆ. ಆದ್ದರಿಂದ ಅರಣ್ಯ ಇಲಾಖೆ ಈ ಬಗ್ಗೆ ಎಚ್ಚರವಹಿಸುವಂತೆ ಮನವಿ ಮಾಡಿದ್ದಾರೆ.
ಮನವಿ ಪತ್ರ ಸ್ವೀಕರಿಸಿದ ಆರ್‌ಎಫ್‌ಒ ಪ್ರಪುಲ್‌ಶೆಟ್ಟಿ, ಅರಣ್ಯದ ಅಂಚಿನಲ್ಲಿ ಕಾಳ್ಗಿಚ್ಚು ಹರಡದಂತೆ ಇಲಾಖೆ ಈಗಾಗಲೇ ಕ್ರಮ ಕೈಗೊಂಡಿದ್ದು ನಿಮ್ಮ ಮನವಿಗೆ ಸ್ಪಂದಿಸಲಾಗುವುದು ಎಂದು ಭರವಸೆ ನೀಡಿದರು.
ಮಡಿಕೇರಿ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಮುಖಂಡ ಎಚ್.ಆರ್. ಸುರೇಶ್, ರೈತ ಪ್ರಮುಖರಾದ ಮತ್ತೂರು ಮಹೇಶ್, ಮಾದ್ರೆ ಕುಶಾಲಪ್ಪ, ಸುರೇಶ್, ರಾಜು, ಅಪ್ಪಾಜಿಗೌಡ ಮುಂತಾದವರು ಹಾಜರಿದ್ದರು.