

ಸಕಲೇಶಪುರ; ತಾಲೂಕಿನ ಬ್ಯಾಚಹಳ್ಳಿ ಗ್ರಾಮದಲ್ಲಿ ಶುಕ್ರವಾರ ಕಾಣಿಸಿಕೊಂಡ ಕಾಳ್ಗಿಚ್ಚಿಗೆ ಎರಡು ಎಕರೆ ಕಾಫಿ ತೋಟ ಆಹುತಿಯಾಗಿದೆ.
ಗ್ರಾಮದ ಹೊರವಲಯದ ಕುರುಚಲು ಅರಣ್ಯಕ್ಕೆ ಕಿಡಿಗೇಡಿಗಳು ಹಾಕಿದ ಬೆಂಕಿ ಕಾಳ್ಗಿಚ್ಚು ಅವತಾರ ತೆಳೆದು ಮನೆಗಳಿಗೆ ನುಗ್ಗುವ ಹಂತ ತಲುಪಿದೆ. ಆದರೆ ಸಕಾಲಕ್ಕೆ ಗ್ರಾಮಕ್ಕೆ ಬಂದ ಅಗ್ನಿಶಾಮಕ ದಳದ ಸಿಬ್ಬಂದಿ ಗ್ರಾಮಸ್ಥರ ಸಹಕರದೊಂದಿಗೆ ಗ್ರಾಮಕ್ಕೆ ನುಗ್ಗುವುದನ್ನು ತಡೆದಿದ್ದಾರೆ. ಅತಿಯಾಗಿ ಬೀಸುತ್ತಿರುವ ಗಾಳಿಯಿಂದಾಗಿ ಗ್ರಾಮದ ಧರ್ಮರಾಜ್ ಎಂಬುವವರಿಗೆ ಸೇರಿದ ಎರಡು ಎಕರೆ ಕಾಫಿತೋಟ ಸಂಪೂರ್ಣ ಕರಕಲಾಗಿದ್ದು ರಾತ್ರಿ ವೇಳೆ ಕಾಳ್ಗಿಚ್ಚಿನ ರುದ್ರನರ್ತನ ಭಯ ಹುಟ್ಟಿಸುವಂತಿದ್ದು ಶನಿವಾರ ಸಹ ಕಾಳ್ಗಿಚ್ಚಿಗೆ ನೂರಾರು ಎಕರೆ ಅರಣ್ಯ ನಾಶವಾಗುತ್ತಿದೆ. ಕಾಳ್ಗಿಚ್ಚು ನಂದಿಸಲು ಅರಣ್ಯ ಇಲಾಖೆಯ ಬಳಿ ಯಾವುದೇ ಯೋಜನೆಯು ಇಲ್ಲದ ಪರಿಣಾಮ ಗ್ರಾಮ ಹಾಗೂ ಕಾಫಿತೋಟಕ್ಕೆ ನುಗ್ಗದಂತೆ ನಿಗಾವಹಿಸಲಾಗಿದೆ. ತಾಲೂಕಿನಲ್ಲಿ ಕಳೆದ ಹಲವು ದಿನಗಳಿಂದ ಕಾಳ್ಗಿಚ್ಚು ನರ್ತನ ಮಾಡುತ್ತಿದ್ದು ಪಶ್ಚಿಮಘಟ್ಟದ ಶೋಲಾ ಹುಲ್ಲುಗಾವಲು ಬಹುತೇಕ ಸುಟ್ಟುಕರಕಲಾಗಿದ್ದು ಅರಣ್ಯಕ್ಕೂ ಸಾಕಷ್ಟು ಹಾನಿಯಾಗಿದೆ.