ಕಾಳೇನಹಳ್ಳಿ ಹೊಸ ಬಡಾವಣೆಗೆ ಶೀಘ್ರ ಕಾವೇರಿ ನೀರು

04 KRN-1
Published on

ಕೆ.ಆರ್.ನಗರ: ಪಟ್ಟಣದ 16ನೇ ವಾರ್ಡ್ ವ್ಯಾಪ್ತಿಗೆ ಸೇರಿದ ಕಾಳೇನಹಳ್ಳಿ ಹೊಸ ಬಡಾವಣೆಗೆ ಕಾವೇರಿ ನದಿಯಿಂದ ಕುಡಿಯುವ ನೀರು ಸರಬರಾಜು ಮಾಡಲು ಅಗತ್ಯ ಕ್ರಮ ಕೈಗೊಳ್ಳುವುದಾಗಿ ಪುರಸಭೆ ಅಧ್ಯಕ್ಷ ಶಿವುನಾಯಕ್ ಭರವಸೆ ನೀಡಿದರು.

ವಾರ್ಡ್ ವ್ಯಾಪ್ತಿಯ 20ಕ್ಕೂ ಹೆಚ್ಚು ಮನೆಗಳಿಗೆ ಕಾವೇರಿ ನದಿ ನೀರು ಸರಬರಾಜು ಆಗದೆ ಅನನುಕೂಲವಾಗಿದೆ ಎಂಬ ದೂರು ಕೇಳಿ ಬಂದ ಹಿನ್ನೆಲೆಯಲ್ಲಿ ಗುರುವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಮಾತನಾಡಿದರು. ಬಡಾವಣೆಯ ನಾಗರಿಕರೊಂದಿಗೆ ಸಮಸ್ಯೆ ಬಗ್ಗೆ ಚರ್ಚಿಸಿದ ಅವರು, ಕಾವೇರಿ ನದಿಯಿಂದ ಪಟ್ಟಣಕ್ಕೆ ಸಮರ್ಪಕವಾಗಿ ನೀರು ಸರಬರಾಜು ಮಾಡಲು ಅಮೃತ ಯೋಜನೆಯಡಿ 30 ಕೋಟಿ ರೂ. ಅನುದಾನ ಮಂಜೂರಾಗಿದ್ದು ಈಗಾಗಲೇ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಮುಂದುವರಿದ ಭಾಗವಾಗಿ ನಿಮ್ಮ ಬಡಾವಣೆಗೂ ಪೈಪ್‌ಲೈನ್ ಮಾಡಿಸಿ ಮುಂದಿನ ದಿನಗಳಲ್ಲಿ ನೀರು ಸರಬರಾಜು ಮಾಡಲಾಗುವುದು ಎಂದು ಮಾಹಿತಿ ನೀಡಿದರು.

ಅಗತ್ಯವಿರುವೆಡೆ ಪೈಪ್‌ಲೈನ್ ಕಾಮಗಾರಿ ಮಾಡಲು ಕೂಡಲೇ ಆಳತೆ ಮಾಡಿ ಅಂದಾಜು ಪಟ್ಟಿ ತಯಾರಿಸುವಂತೆ ಕಿರಿಯ ಇಂಜಿನಿಯರ್ ಸೌಮ್ಯಾ ಅವರಿಗೆ ಸೂಚಿಸಿದರು. ಕುಡಿಯುವ ನೀರಿನ ಸರಬರಾಜು ಮಾಡುವ ವಿಚಾರದಲ್ಲಿ ನಿರ್ಲಕ್ಷ್ಯ ಮಾಡಬಾರದು ಎಂದು ತಿಳಿಸಿದರು.

ಪಟ್ಟಣದ ಗರುಡಗಂಭದ ವೃತ್ತಕ್ಕೆ ಆಧುನಿಕ ಸ್ಪರ್ಶ ನೀಡಲಾಗುವುದು. ಪುರಸಭೆ ವೃತ್ತದಲ್ಲಿ ಕಾವೇರಿ ಮಾತೆ ಪ್ರತಿಮೆ ನಿರ್ಮಾಣ ಮಾಡಲಿದ್ದು ಈ ಸಂಬಂಧ ಸಾರ್ವಜನಿಕರು ಸಲಹೆ ಮತ್ತು ಸೂಚನೆ ಆಹ್ವಾನಿಸಲಾಗಿದೆ. ಪುರಸಭೆಗೆ ಸೇರಿದ ತರಕಾರಿ ಮಾರಾಟ ಸಮುಚ್ಚಯಕ್ಕೆ ತಿಂಗಳಾಂತ್ಯದ ವೇಳೆಗೆ ವ್ಯಾಪಾರಿಗಳನ್ನು ಸ್ಥಳಾಂತರ ಮಾಡಲಾಗುವುದು. ಇದರಿಂದ ಪ್ರಮುಖ ರಸ್ತೆಗಳಲ್ಲಿ ವಾಹನ ಸಂಚಾರ ಸಮಸ್ಯೆ ಬಗೆಹರಿಯಲಿದ್ದು ಸಾರ್ವಜನಿಕರಿಗೆ ಅನುಕೂಲವಾಗಲಿದೆ ಎಂದು ಮಾಹಿತಿ ನೀಡಿದರು.

ಶಾಸಕ ಡಿ.ರವಿಶಂಕರ್ ಅವರ ಮಾರ್ಗದರ್ಶನದಲ್ಲಿ ಪಟ್ಟಣದ ಅಭಿವೃದ್ಧಿಗೆ ಹಲವು ಯೋಜನೆಗಳನ್ನು ಕೈಗೊಂಡಿದ್ದೇವೆ. ಶೀಘ್ರ ಎಲ್ಲ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗುವುದು ಎಂದರು.

ಪುರಸಭೆ ಮುಖ್ಯಾಧಿಕಾರಿ ಬಿ.ವಿ.ವೆಂಕಟೇಶ್ ಮಾತನಾಡಿ, ಕಾವೇರಿ ನದಿ ನೀರು ಸರಬರಾಜು ಮಾಡಲು ಶೀಘ್ರ ಕ್ರಮ ಕೈಗೊಳ್ಳಲಾಗುವುದು. ಅಗತ್ಯವಿರುವೆಡೆ ಬೀದಿ ದೀಪ ಅಳವಡಿಸಲಾಗುವುದು ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net