

ರಿಪ್ಪನ್‌ಪೇಟೆ: ಸಾಂಬಾರು ಪದಾರ್ಥಗಳಲ್ಲಿ ಕಾಳುಮೆಣಸು ರಾಣಿಯ ಸ್ಥಾನದಲ್ಲಿದೆ. ವಿವಿಧ ಬಗೆಯ ತೋಟಗಾರಿಕೆ ಕೃಷಿಯಲ್ಲಿ ಮಿಶ್ರ ಬೆಳೆಯಾಗಿ ಕಾಳುಮೆಣಸು ಬೆಳೆದು ಉತ್ತಮ ಲಾಭ ಗಳಿಸಬಹುದು ಎಂದು ಸಕಲೇಶಪುರದ ಸ್ಪೈಸಸ್ ಬೋರ್ಡ್ ತಾಂತ್ರಿಕ ಸಲಹೆಗಾರ ಕುಮಾರ್ ತಿಳಿಸಿದರು.
ಸಮೀಪದ ಚಿಕ್ಕಜೇನಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಕಾಳುಮೆಣಸು ಉತ್ಪಾದನೆಯಲ್ಲಿ ಸಮಗ್ರ-ಸುಸ್ಥಿರ ಕೃಷಿ ಕುರಿತಾದ ತರಬೇತಿ ಶಿಬಿರದಲ್ಲಿ ಮಾತನಾಡಿ, ನೊಯ್ಡದ ಸತ್ಯಪಾಲ್ ಮತ್ತು ಧರ್ಮಪಾಲ್ ಕಂಪನಿ ಮಲೆನಾಡಿನ ಸಾಂಬಾರು ಪದಾರ್ಥಗಳನ್ನು ಉತ್ಕೃಷ್ಟ ಬೆಲೆ ಕೊಟ್ಟು ಖರೀದಿಸುತ್ತಿವೆ ಎಂದ ಅವರು, ಕೃಷಿಕರಿಗೆ ಕಂಪನಿ ನೀಡುತ್ತಿರುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು.
ಮಲೆನಾಡು ಮತ್ತು ಅರೆಮಲೆನಾಡಿನಲ್ಲಿ ಕಾಳುಮೆಣಸು ಫಸಲು ಉತ್ತಮವಾಗಿ ಬರುತ್ತದೆ. ಅಡಕೆ, ತೆಂಗು ಯಾವುದೇ ಬಗೆಯ ಇತರ ಮರಗಳಿಗೆ ಕಾಳುಮೆಣಸು ಹಬ್ಬಿಸಿ ಕೃಷಿ ನಡೆಸಬಹುದು. ಕಾಳುಮೆಣಸಿನ ಬಳ್ಳಿಯ ಬೇರುಗಳು ಮಣ್ಣಿನಲ್ಲಿ ಹರಡಿಕೊಂಡು ಮಣ್ಣು ಸಡಿಲಗೊಲಿಸಿ ತಾನು ಆಶ್ರಯ ಪಡೆದ ಮರಕ್ಕೂ ಪರೋಕ್ಷ ಸಹಕಾರ ನೀಡುತ್ತದೆ. ಇದರಿಂದ ಇಡೀ ಕೃಷಿ ಭೂಮಿಯ ಫಲವತ್ತತೆ ಸ್ಥಿರಗೊಳ್ಳುತ್ತದೆ ಎಂದು ತಿಳಿಸಿದರು.
ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಸಾಂಬಾರು ಪದಾರ್ಥಗಳಿಗೆ ಅತ್ಯಧಿಕ ಬೇಡಿಕೆ ಇರುವ ಕಾರಣ ಯಾವ ಕಾಲಕ್ಕೂ ಕಾಳು ಮೆಣಸಿನ ದರ ಇಳಿಮುಖವಾಗದು ಎಂದರು. ಕಾಳುಮೆಣಸಿನ ವಿವಿಧ ತಳಿಗಳು ಮತ್ತು ಕೃಷಿ ನಿರ್ವಹಣೆ ವಿಧಾನದ ಬಗ್ಗೆ ವಿಸ್ತೃತವಾಗಿ ತಿಳಿಸಿಕೊಟ್ಟರು.
ಪ್ರಗತಿಪರ ಕೃಷಿಕ ಪೂರ್ಣಪ್ರಜ್ಞ ಬೇಳೂರು ಮಾತನಾಡಿ, ಸಾವಯವದ ಮೂಲಕ ರೈತರು ಸುಸ್ಥಿರ ಕೃಷಿ ನಡೆಸಬಹುದು. ಅಡಕೆ, ತೆಂಗು ಇತ್ಯಾದಿ ತೋಟದ ಕೃಷಿಯ ಜತೆ ಜತೆಗೆ ಉಪ ಉತ್ಪನ್ನ ಕೊಡುವ ಜಾಯಿಕಾಯಿ, ಲವಂಗ, ದಾಲ್ಚಿನಿ, ಚಕ್ಕೆ ಇತ್ಯಾದಿ ಗಿಡ ನೆಟ್ಟು ಬೆಳೆಸಿ ವರ್ಷವಿಡೀ ಉಪ ಆದಾಯದ ಮೂಲ ರೂಪಿಸಿಕೊಂಡು ಯಶಸ್ವಿಯಾಗಬಹುದು ಎಂದರು.
ಝಾಕಿರಾ ಬಾನು, ವೆಂಕಟರಮಣ ವಡ್ಡಿನಬೈಲು, ಜಿ.ಎಂ.ಪೀಟರ್, ಪತ್ರಕರ್ತ ಎನ್.ಡಿ.ಹೆಗಡೆ ಇತರರಿದ್ದರು.