

ಔರಾದ್: 2010ರಲ್ಲಿ 2.50 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿದ ತಾಲೂಕಿನ ಸಾವರಗಾಂವ್ ಹತ್ತಿರದ ಕಾಳಿಪಟ್ಟಿ ತಾಂಡಾದ ಬ್ರಿಡ್ಜ್ ಕಂ ಬ್ಯಾರೇಜ್ ಪ್ರಸಕ್ತ ಸುರಿದ ಉತ್ತಮ ಮಳೆಗೆ ಭರ್ತಿಯಾಗಿದ್ದು, ಸಾವಿರಾರು ರೈತರಿಗೆ ವರದಾನವಾಗಿದೆ.
ಮೂರು ವರ್ಷಗಳಿಂದ ಬರಗಾಲ ಆವರಿಸಿ ಈ ಭಾಗದ ರೈತರು ಸಮಸ್ಯೆ ಎದುರಿಸುತ್ತಿದ್ದರು. ಹನಿ ನೀರಿಗೂ ಪರದಾಡುವ ಪ್ರಸಂಗ ಬಂದಿತ್ತು. ಆದರೆ ಪ್ರಸಕ್ತ ವರ್ಷ ಸುರಿದ ಭಾರಿ ಮಳೆಯಿಂದ ಈ ಬ್ರಿಡ್ಜ್ ಕಂ ಬ್ಯಾರೇಜ್ ನೀರಿನಿಂದ ತುಂಬಿ ತುಳುಕುತ್ತಿದೆ. ಸುತ್ತಲಿನ ಅಂತರ್ಜಲ ಮಟ್ಟ ಸಹ ಹೆಚ್ಚಾಗಿದ್ದು, ರೈತರು ಮತ್ತು ಸಾರ್ವಜನಿಕರಲ್ಲಿ ಖುಷಿ ತಂದಿದೆ.
ಈ ಭಾಗದ ಸಾವರಗಾಂವ್, ಕಾಳಿ ಪಟ್ಟಿ ತಾಂಡಾ, ದೇಸುನಾಯಕ ತಾಂಡಾ, ಬಾವನ್ಮಟಿ ತಾಂಡಾ ಸೇರಿ ಸುಮಾರು 8 ಗ್ರಾಮಗಳ ರೈತರಿಗೆ ಈ ಬ್ರಿಡ್ಜ್ ಕಂ ಬ್ಯಾರೇಜ್ ಭಗೀರಥನಂತೆ ಕೆಲಸ ಮಾಡುತ್ತಿದೆ. ಸುತ್ತಮುತ್ತಲಿನ 600 ಎಕರೆಗಳಷ್ಟು ಭೂಮಿಗೆ ನೀರುಣಿಸುವ ಕಲ್ಪವೃಕ್ಷವಾಗಿದೆ.
ಇತ್ತೀಚೆಗೆ ಬ್ರಿಡ್ಜ್ ಕಂ ಬ್ಯಾಬೇಜ್ ಗೆ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ್ ಅವರು ಭೇಟಿ ನೀಡಿ ವೀಕ್ಷಣೆ ಮಾಡಿದರು. ಉತ್ತಮ ಮಳೆಯಾದ ಪರಿಣಾಮ ಬ್ಯಾರೇಜ್ ಭರ್ತಿಯಾಗಿರುವುದು ಖುಷಿ ತಂದಿದೆ. ಇದರಿಂದ ಈ ಭಾಗದ ನೂರಾರು ಎಕರೆ ಪ್ರದೇಶಕ್ಕೆ ಅನುಕೂಲವಾಗಲಿದೆ. ರೈತರು ಸದುಪಯೋಗ ಪಡೆದುಕೊಳ್ಳಬೇಕು ಎಂದು ಕೋರಿದರು.