ಕಾಳಸಂತೆಯಲ್ಲಿ ರೆಮ್‌ಡೆಸಿವಿರ್ ಮಾರಾಟ: ಸರ್ಕಾರಿ ಆಸ್ಪತ್ರೆ ಸಿಬ್ಬಂದಿ ಸೇರಿ 7 ಜನರ ಬಂಧನ

IMG-20210507-WA0104
Published on

ವಿಜಯಪುರ: ಕಾಳಸಂತೆಯಲ್ಲಿ ರೆಮ್‌ಡೆಸಿವಿರ್ ಚುಚ್ಚುಮದ್ದು ಲಸಿಕೆ ಮಾರಾಟ ಮಾಡುತ್ತಿದ್ದ ಏಳು ಜನರನ್ನು ಬಂಧಿಸಿರುವ ಪೊಲೀಸರು ಅವರಿಂದ 3 ಬಾಟಲ್ ಚುಚ್ಚುಮದ್ದು ಲಸಿಕೆ, 3 ಉಪಯೋಗಿಸಿದ ಬಾಟಲ್ ಸೇರಿದಂತೆ ಒಟ್ಟು 64 ಸಾವಿರ ರೂ.ನಗದು ಮತ್ತು 7 ಮೊಬೈಲ್ ವಶಕ್ಕೆ ಪಡೆದಿದ್ದಾರೆ.

ಸರ್ಕಾರಿ ಜಿಲ್ಲಾಸ್ಪತ್ರೆಯ ಏಳು ಸಿಬ್ಬಂದಿ ಮತ್ತು ಇಬ್ಬರು ಖಾಸಗಿ ಆಸ್ಪತ್ರೆ ಸಿಬ್ಬಂದಿ ಸೇರಿ ಒಟ್ಟು 9 ಜನರ ಮೇಲೆ ಪ್ರಕರಣ ದಾಖಲಾಗಿದ್ದು ಇಬ್ಬರು ಪರಾರಿಯಾಗಿದ್ದಾರೆ. ಸರ್ಕಾರಿ ಜಿಲ್ಲಾಸ್ಪತ್ರೆ ಡಿ ದರ್ಜೆ ನೌಕರ ರಾಜೇಸಾಬ ಬಾಬು ಹತ್ತರಕಿಹಾಳ (28), ಇಮ್ತಿಯಾಜ್ ಹುಸೇನಸಾಬ ಮಟ್ಟಿ (31), ಮೌಲಾಲಿ ರಜಾಕಸಾಬ ಹತ್ತರಕಿಹಾಳ (24), ಹೊರಗುತ್ತಿಗೆ ಸ್ಟಾಫ್‌ನರ್ಸ್ ಶಿವರಾಜಕುಮಾರ ಸಿದ್ದಗೊಂಡ ಮದರಿ (25), ಜಕ್ಕಪ್ಪ ಮಲಕಾರಿ ತಡ್ಲಗಿ (24), ಮುನೀರಬಾಂಗಿ ಆಸ್ಪತ್ರೆಯ ಸಿಬ್ಬಂದಿ ಸೈಯದ್ ಊರ್ಫ್ ಮುನ್ನಾ ಮೌಲಾಸಾಬ ಆಹೇರಿ (25), ಬಂಜಾರಾ ಆಸ್ಪತ್ರೆ ಸಿಬ್ಬಂದಿ ಸಂಜೀವ ನರಸಿಂಹ ಜೋಶಿ (44) ಬಂಧಿತ ಆರೋಪಿಗಳು.

ಸರ್ಕಾರಿ ಆಸ್ಪತ್ರೆ ಸ್ಟಾಫ್‌ನರ್ಸ್ ಯಲ್ಲಮ್ಮ ಕನ್ನಾಳ ಹಾಗೂ ಸುರೇಖಾ ಗಾಯಕವಾಡ ಪರಾರಿಯಾಗಿದ್ದು ಶೋಧ ಕಾರ್ಯ ಮುಂದುವರಿದಿದೆ.

ಆರೋಪಿಗಳು ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾದ ರೋಗಿಗಳಿಗೆ ರೆಮ್‌ಡೆಸಿವಿರ್ ಚುಚ್ಚುಮದ್ದು ಲಸಿಕೆಯನ್ನು ಬಾಂಗಿ ಹಾಗೂ ಬಂಜಾರಾ ಆಸ್ಪತ್ರೆಯಲ್ಲಿ ಕೆಲಸ ಮಾಡುವ ಸಿಬ್ಬಂದಿ ಜೊತೆಗೆ ಶಾಮೀಲಾಗಿ ರೆಮ್‌ಡಿಸಿವಿರ್ ಮಾರಾಟ ಮಾಡುವಾಗ ಸಿಕ್ಕಿಬಿದ್ದಿದ್ದಾರೆಂದು ಎಸ್‌ಪಿ ಅನುಪಮ ಅಗರವಾಲ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net